Home Mangalorean News Kannada News ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಇಂದಿನ ಅಗತ್ಯ – ನೀಲಕಂಠ ಎಮ್ ಹೆಗ್ಡೆ

ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಇಂದಿನ ಅಗತ್ಯ – ನೀಲಕಂಠ ಎಮ್ ಹೆಗ್ಡೆ

Spread the love

ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಇಂದಿನ ಅಗತ್ಯ – ನೀಲಕಂಠ ಎಮ್ ಹೆಗ್ಡೆ

ಕುಂದಾಪುರ: ಎಲ್ಲಿಯ ತನಕ ಗೆಲುವು ಸಿಗುತ್ತದೊ ಅಲ್ಲಿಯ ತನಕವೂ ಹೋರಾಟ ಮಾಡಬೇಕು. ವ್ಯಕ್ತಿ ಹಾಗೂ ವ್ಯಕ್ತಿತ್ವ ಬೇರೆ ಬೇರೆಯದು. ಈ ಜೀವ ನಮ್ಮದಲ್ಲ, ಆದರೆ ಜೀವನ ನಮ್ಮದು. ಅಂತಹ ಜೀವನವನ್ನು ನಾವು ರೂಪಿಸಿಕೊಳ್ಳಬೇಕು. ಜೀವನದ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವಂತಹ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ನೀಲಕಂಠ ಎಮ್ ಹೆಗ್ಡೆ ಹೇಳಿದರು.

ಐ.ಎಮ್.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಮೂಡ್ಲುಕಟ್ಟೆ ಇದರ ಆಶ್ರಯದಲ್ಲಿ ಶುಕ್ರವಾರ ಕಾಲೇಜು ಸಭಾಭವನದಲ್ಲಿ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ವಿವಿಧ ಕಾಲೇಜು ವಿದ್ಯಾಥಿಗಳಿಗಾಗಿ ಆಯೋಜಿಸಿದ ಐ.ಎಮ್.ಜೆ.ಐ.ಎಸ್.ಸಿ ಯಂಗ್ ಲೀಡರ್ ಅವಾರ್ಡ್-2024 ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಉತ್ತೇಜಿಸುವ ಬಹಳ ಅಪರೂಪದ ಕಾರ್ಯಕ್ರಮವಿದು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಅವರ ಬದುಕಿನ ಜೀವನವನ್ನು ಅರ್ಥೈಸಿಕೊಂಡರೆ ಇಡೀ ಜಗತ್ತನ್ನು ಅರ್ಥೈಸಿಕೊಂಡ ಹಾಗೆ. ಭಾರತದ ಸಂಸ್ಕøತಿಯ ಕುರಿತು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಪುರುಷ ವಿವೇಕಾನಂದರ ಜನ್ಮ ದಿನೋತ್ಸವದಂದು ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಕರೆ ತಂದು ಅವರಲ್ಲಿರುವ ಪ್ರತಿಭೆಯನ್ನು ಹೊರತರುವ ಮೂಲಕ ಶಶಕ್ತ, ಸಮರ್ಥರನ್ನಾಗಿ ಮಾಡುವ ಸದುದ್ದೇಶದಿಂದ ಐ.ಎಮ್ಜೆ ವಿದ್ಯಾ ಸಂಸ್ಥೆಯವರು ಆಯೋಜಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.

ವಿವೇಕಾನಂದರ ಬದುಕಿನ ಚಿತ್ರಣವನ್ನು ನಾವು ಅರ್ಥೈಸಿಕೊಂಡರೆ ನಮ್ಮ ಬದುಕಿನಲ್ಲಿ ನಾವು ಧನ್ಯತೆಯನ್ನು ಕಂಡುಕೊಳ್ಳಬಹುದು. ಬದುಕಿನಲ್ಲಿ ಗೆಲುವು ಸಿಗಬೇಕಾದರೆ ಕಷ್ಟ ಪಡಲೇಬೇಕು. ನಾಳೆಯ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಹೆಚ್ಚೆಚ್ಚು ಇಂತಹ ಮಹಾನ್ ಸಾಧಕರ ಜೀವನ ಚರಿತ್ರೆಯನ್ನು ಅರ್ಥೈಸಿಕೊಳ್ಳಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ. ಜೀವನದಲ್ಲಿ ಸಿಗುವ ಒಳ್ಳೊಳ್ಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಜೀವನದಲ್ಲಿ ಖಂಡಿತವಾಗಿಯೂ ಸಾರ್ಥಕತೆ ಕಂಡುಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲೆ ಪ್ರತಿಭಾ ಎಮ್ ಪಟೇಲ್, 22ಕ್ಕೂ ಅಧಿಕ ಕಾಲೇಜುಗಳಿಂದ ಈಗಾಗಲೇ ಆಯ್ಕೆ ಮಾಡಿದ 50 ರಷ್ಟು ವಿದ್ಯಾರ್ಥಿಗಳು ಇಂದು ಫೈನಲ್ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಇಲ್ಲಿಯೂ ಹಲವು ಸುತ್ತುಗಳಿದ್ದು, ಕೊಟ್ಟ ವಿಷಯದ ಬಗ್ಗೆ ಧೈರ್ಯದಿಂದ ಮುಕ್ತವಾಗಿ ಮಾತನಾಡಬಹುದು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಕಲಿಕೆ ಮಾತ್ರ ನಿರಂತರವಾಗಿರಬೇಕು. ಕಲಿಕೆ ನಿಲ್ಲಿಸಿದರೆ ನಮ್ಮ ಬೆಳವಣಿಗೆ ಕುಂದುತ್ತವೆ. ತಲುಪುವ ಗಮ್ಯ ಬಹಳ ದೂರವಿದ್ದು, ಕಠಿಣ ಪರಿಶ್ರಮ, ಏಕಾಗ್ರತೆ ಇದ್ದರೆ ಖಂಡಿತವಾಗಿಯೂ ಗುರಿಯ ಬೆನ್ನು ಹತ್ತಬಹುದು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸೋಲು-ಗೆಲುವುಗಳನ್ನು ಸಮಾನವಾಗಿ ಕಂಡಾಗ ಮಾತ್ರ ಜೀವನದಲ್ಲಿ ಮೇಲೆ ಬರಬಹುದು ಎಂದರು.

ವಿಜಯ ಬ್ಯಾಂಕ್ ನಿವೃತ್ತ ಸಹಾಯಕ ಮುಖ್ಯ ವ್ಯವಸ್ಥಾಪಕ ಸದಾನಂದ ಭಟ್, ಕುಂದಾಪುರ ಲಯನ್ಸ್ನ ಮಾಜಿ ಅಧ್ಯಕ್ಷ ರಾಜೀವ್ ಕೋಟ್ಯಾನ್, ಐ.ಎಮ್.ಜೆ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ಉಪಪ್ರಾಂಶುಪಾಲ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಚೇತನಾ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಸುಮನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಈಗಾಗಲೇ ಮೊದಲ ಸುತ್ತಿನಲ್ಲಿ ನೆಡೆದ ಸ್ಪರ್ಧೆಯಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ 22 ಕ್ಕೂ ಕಾಲೇಜಿನ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಅಂತಿಮ ಹಂತದ ಸುತ್ತಿಗೆ ಆಯ್ಕೆಯಾದ 15 ಕಾಲೇಜಿನ 45 ವಿದ್ಯಾರ್ಥಿಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.


Spread the love

Exit mobile version