ಶಂಕರನಾರಾಯಣ : ಪೊಲೀಸ್-ಪತ್ರಕರ್ತರ ಹೆಸರಿನಲ್ಲಿ ಯುವತಿಗೆ ಬ್ಲ್ಯಾಕ್‌ ಮೇಲ್‌ – ದೂರು ದಾಖಲು

Spread the love

ಶಂಕರನಾರಾಯಣ : ಪೊಲೀಸ್-ಪತ್ರಕರ್ತರ ಹೆಸರಿನಲ್ಲಿ ಯುವತಿಗೆ ಬ್ಲ್ಯಾಕ್‌ ಮೇಲ್‌ – ದೂರು ದಾಖಲು

ಕುಂದಾಪುರ: ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯವನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಯುವತಿಗೆ ನ್ಯಾಯ ದೊರಕಿಸಿಕೊಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣ ವರದಿಯಾಗಿದೆ.

ಶೇಖರ ಬಳೆಗಾರ್ ಬಂಧಿತ ಆರೋಪಿ.

ಪತ್ರಿಕೆ ಹಾಗೂ ಪೊಲೀಸರ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾನೆ ಎಂದು ಯುವತಿಯೊಬ್ಬಳು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಂಕರನಾರಾಯಣ ಠಾಣಾ ವ್ಯಾಪ್ತಿಯ ನೆಂಚಾರು ಎಂಬಲ್ಲಿಯ ಯುವತಿ ಹಾಗೂ ಹಾಲಾಡಿಯ ಯೋಗೀಶ ನಾಯ್ಕ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ನಡೆದ ಕಾರಣ ಯುವತಿ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಳು. ಠಾಣೆಯಲ್ಲಿ ಪಂಚಾಯಿತಿ ನಡೆದು ಇಬ್ಬರೂ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ.

ಯುವತಿ ಕುಂದಾಪುರ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿದ್ದು, ಶೇಖರ್ ಬಳೆಗಾರ್ ಅಲ್ಲಿಗೆ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದಾಗಿ ಬಂದಿದ್ದ. ಈ ಸಂದರ್ಭ ಯುವತಿ ಹಾಗೂ ಶೇಖರ ಬಳೆಗಾರ್ ಪರಿಚಯವಾಗಿದ್ದು, ಯುವತಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ತನಗೆ ಅಧಿಕಾರಿಗಳು ಹಾಗೂ ಪತ್ರಿಕೆಯವರ ಸಂಪರ್ಕ ಇದೆ ಎಂದು ನಂಬಿಸಿ, ಅವರಿಗೆ ಹಣ ಕೊಡಬೇಕಾಗುತ್ತದೆ ಎಂದು ಹೇಳಿದ್ದು, ಮೂರು ಬಾರಿ ಒಟ್ಟು 95 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದು ಇನ್ನೂ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.


Spread the love