ಶಂಕರನಾರಾಯಣ: ಸ್ನಾನಕ್ಕೆಂದು ನದಿಗೆ ಇಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

Spread the love

ಶಂಕರನಾರಾಯಣ: ಸ್ನಾನಕ್ಕೆಂದು ನದಿಗೆ ಇಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ: ಸ್ನಾನಕ್ಕೆಂದು ಹೊಳೆಗೆ ಇಳಿದ ಸಂದರ್ಭ ನೀರಲ್ಲಿ ಮುಳುಗಿ ಯುವಕರಿಬ್ಬರು ಸಾವನ್ನಪ್ಪಿದ ಖೇದಕರ ಘಟನೆ ಆರ್ಡಿ ಗ್ರಾಮದ ಗಂಟುಬೀಳುವಿನಲ್ಲಿ ಸೋಮವಾರ ಸಂಜೆ ನಡೆದಿದೆ.

ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ| ಕಾಳ ನಾಯ್ಕ್ ಅವರ ಪುತ್ರ ಸುರೇಶ (19)  ಹಾಗೂ ಮಹಾಬಲ ನಾಯ್ಕ್ ಮೋಹನ ನಾಯ್ಕ್ (22) ಅವರ ಪುತ್ರ  ಸಾವನ್ನಪ್ಪಿದ ದುರ್ದೈವಿಗಳು.

ಘಟನೆ ವಿವರ:
ಅಲ್ಬಾಡಿಯ ನಿವಾಸಿಗಳಾದ ಮೋಹನ್ ಹಾಗೂ ಸುರೇಶ್ ಮಹಾಬಲ ನಾಯ್ಕ್ ಅವರೊಂದಿಗೆ ಗಾರೆ ಕೆಲಸಕ್ಕೆ ಆರ್ಡಿ ಗ್ರಾಮದಿಂದ ಸುಮಾರು 3 ಕಿ.ಮೀ. ಒಳಗಿರುವ ಗಂಟುಬೀಳು ಎಂಬಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆಂದು ಹೋಗಿದ್ದರು. ಸೋಮವಾರ ಮಧ್ಯಾಹ್ನ ಸುಮಾರು 1.30 ರ ಸುಮಾರಿಗೆ ಕೆಲಸ ಮುಗಿಸಿ, ಊಟಕ್ಕೂ ಮುನ್ನ ಆ ಮನೆಯ ಸಮೀಪವೇ ಇದ್ದ ಹೊಳೆಗೆ ಯುವಕರಿಬ್ಬರು ಸ್ನಾನಕ್ಕೆಂದು ಇಳಿದಿದ್ದಾರೆ. ಹೊಳೆ ಸುಮಾರು 15 ಅಡಿ ಆಳವಿದ್ದಿತ್ತೆಂದು ಹೇಳಲಾಗಿದ್ದು, ಹೊಳೆಗೆ ಇಳಿದ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ಒಬ್ಬರು ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆಯೇ ಅಥವಾ ಇಬ್ಬರು ಒಟ್ಟಿಗೆ ಮುಳುಗಿರಬಹುದೇ ಎನ್ನುವ ಕುರಿತು ಖಚಿತ ಮಾಹಿತಿ ಇಲ್ಲ. ಸ್ಥಳೀಯರೆಲ್ಲ ಇವರಿಗಾಗಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದು, ಎಲ್ಲರ ಸಹಾಯದಿಂದ ಸಂಜೆ 6.30 ರ ಸುಮಾರಿಗೆ ಇಬ್ಬರ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಲಾಗಿದೆ.

ಘಟನಾ ಸ್ಥಳಕ್ಕೆ ಶಂಕರನಾರಾಯಣ ಎಸ್‌ಐ ಶ್ರೀಧರ ನಾಯ್ಕ್, ಪೊಲೀಸ್ ಸಿಬ್ಬಂದಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸೂರ್ಗೋಳಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love