ಶಂಕರಪುರ ವಿಶ್ವಾಸದ ಮನೆಯ ಶ್ರಮದಿಂದ 12 ವರ್ಷಗಳ ಬಳಿಕ ಒಂದಾದ ತಾಯಿ ಮಕ್ಕಳು!

Spread the love

ಶಂಕರಪುರ ವಿಶ್ವಾಸದ ಮನೆಯ ಶ್ರಮದಿಂದ 12 ವರ್ಷಗಳ ಬಳಿಕ ಒಂದಾದ ತಾಯಿ ಮಕ್ಕಳು!

ಉಡುಪಿ: ಮಾನಸಿಕ ಅಸ್ವಸ್ಥರಾಗಿ ಬೀದಿ ಬೀದಿ ಅಲೆದಾಡುತ್ತಿದ್ದ ಅಸ್ಸಾಂ ಮೂಲಕ ಮಹಿಳೆಯನ್ನು ಇದೀಗ ಶಂಕರಪುರದ ವಿಶ್ವಾಸದ ಮನೆ ಮಾನಸಿಕ ಪುನರ್‌ ವಸತಿ ಕೇಂದ್ರದ ಆರೈಕೆಯಿಂದ ಗುಣಮುಖರಾಗಿ 12 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಳ್ಳುತ್ತಿದ್ದಾರೆ.

ಈ ಕುರಿತು ಪುನರ್‌ ವಸತಿ ಕೇಂದ್ರದ ಸಂಸ್ಥಾಪಕ ಪಾಸ್ಟರ್‌ ಸುನೀಲ್‌ ಜಾನ್‌ ಡಿಸೋಜಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ 2009 ರ ಸೆಪ್ಟೆಂಬರ್‌ 14 ರಂದು ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥರಾಗಿ, ಊಟವಿಲ್ಲದೆ, ಉಟ್ಟ ಬಟ್ಟೆಯೊಂದಿಗೆ ಅಲೆದಾಡುತ್ತಿದ್ದ ಓರ್ವ ಮಹಿಳೆಯನ್ನು ವಿಶ್ವಾಸದ ಮನೆ ಸಿಬ್ಬಂದಿಯವರು ಕರೆತಂದರು. ಅವರು ತರುವಾಗ ತುಂಬಾ ಮಾತನಾಡುತ್ತಿದ್ದರು ಮತ್ತು ಬೈಯುತ್ತಿದ್ದರು. ವಿಶ್ವಾಸದ ಮನೆಗೆ ಕರೆತಂದ ನಂತರ ಆರೈಕೆ, ಪ್ರೀತಿ ಮತ್ತು ಔಷಧೋಪಚಾರದಿಂದ ಒಂದು ತಿಂಗಳೊಳಗೆ ಗುಣಮುಖರಾದರು.

ಇವರ ಹೆಸರು ಕೇಳೀದರೆ ಮಲ್ಲಕಾ ಬೇಗಂ/ಖತೂನ್ ಎಂದು ಹೇಳುತ್ತಿದ್ದರು. ಅಂದಿನಿಂದ ನನಗೆ ದುಬ್ರಿ ಹೋಗಬೇಕೆಂದು ಹೇಳುತ್ತಿದ್ದರು. ಆದರೆ ಅವರು ಬಂಗಾಳಿ ಭಾಷೆ ಮಾತನಾಡುತ್ತಿದ್ದುದರಿಂದ ಯಾರಿಗೂ ಅವರು ಏನು ಮಾತನಾಡುತ್ತಾರೆ ಎಂದು ತಿಳಿಯುತ್ತಿರಲಿಲ್ಲ. ದಿನಗಳು, ವರ್ಷಗಳು ಕಳೆಯುತ್ತಿದ್ದಂತೆ ಅನೇಕ ಸಹಾಯ ಅವರು ಇತರರಿಗೆ ಮಾಡುತ್ತಿದ್ದರು. ಅವರು ವಿಳಾಸ ಕೇಳಿದಾಗಲೆಲ್ಲ ಅಸ್ಸಾಂನ ದುಬ್ರಿ ಎಂದು ಹೇಳುತ್ತಿದ್ದರು. ನಾನು ಮುಸ್ಲಿಂ ಸಮುದಾಯದವಳು ಎಂದು ಸಹ ಹೇಳುತ್ತಿದ್ದರು. ಅಂದಿನಿಂದ ಅವರು ಹೇಳಿದ ಎಲ್ಲಾ ವಿಳಾಸಗಳಿಗೆ ಕಡಿಮೆ ಎಂದರೆ 25 ಪತ್ರಗಳನ್ನು ಬರೆದೆವು, ಆದರೆ ಎಲ್ಲಾ ಪತ್ರಗಳು ಹಿಂದಿರುಗಿ ಬರುತ್ತಿತ್ತು. ಅಲ್ಲಿಯ ಪೋಲಿಸ್ ಅಧಿಕಾರಗಳಿಗೆ ಸಂಧಿಸಿದಾಗ ಅವರಿಗೆ ವಿಳಾಸ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸಂಸ್ಥೆಯ ಸಂಸ್ಥಾಪಕರು ಮತ್ತು ಉಪಾಧ್ಯಕ್ಷರು ಬಂದರೆ ನನಗೆ ಊರಿಗೆ ಹೋಗಬೇಕು ಎಂದು ಜೋರಾಗಿ ಅಳುತ್ತಿದ್ದರು. ಯಾರಾದರೂ ಆಶ್ರಮಕ್ಕೆ ಭೇಟಿಯಾಗಲು ಬಂದರೆ ನನ್ನ ಊರು ಅಸ್ಸಾಂನ ದುಬ್ರಿ, ನನಗೆ 5 ಮಕ್ಕಳಿದ್ದಾರೆ ಎಂದು ಅಳುತ್ತಿದ್ದರು. ಇವರ ನಂತರ ಬಂದವರು ಎಲ್ಲರೂ ಊರಿಗೆ ಹೋದರೆ ಸಾಕು ತುಂಬಾ ಅಳುತ್ತಿದ್ದರು. ಆಗ ವಿಶ್ವಾಸದ ಮನೆಯ ಸಿಬ್ಬಂದಿಯವರು ನೀವು ಸಹ ಒಂದು ದಿನ ನಿಮ್ಮ ಊರಿಗೆ ಹೋಗುತ್ತಿರಿ, ಅಳಬೇಡಿರಿ ಎಂದು ಧೈರ್ಯ ತುಂಬುತ್ತಿದ್ದರು.

ನಮ್ಮ ಸಂಸ್ಥೆಗೆ ಕ್ಯಾಂಪ್ ಮಾಡುವುದಕ್ಕಾಗಿ ತಿಂಗಳಿಗೊಮ್ಮೆ ಮಣಿಪಾಲದ ಕೆಎಮ್‍ಸಿ ವೈದ್ಯರಾದ ಡಾ. ಶರ್ಮಾರವರು ತಂಡವಾಗಿ ಬರುತ್ತಾರೆ. ಅವರ ತಂಡದವರು ಮಲ್ಲಿಕಾ ಬೇಗಂರವರೊಂದಿಗೆ ಮಾತನಾಡಿದಾಗ, ಕೆಲವು ಮಾಹಿತಿ ಸಂಗ್ರಹಿಸಿ, ಅಸ್ಸಾಂನಲ್ಲಿರುವ ದುಬ್ರಿ ಊರಿಗೆ ಸಂಪರ್ಕಿಸಲು ಸಾಧ್ಯವಾಯಿತು. ಅವರ ದೊಡ್ಡ ಮಗನನ್ನು ಸಂಪರ್ಕಿಸಿ, ಇವರು ತಾಯಿಯೊಂದಿಗೆ ಮಾತನಾಡಿದರು  ಎಂದರು.

ದಿನಾಂಕ 17-09-2021 ರಂದು ಇವರ ಎರಡನೇ ಮಗನಾದ ತಹಜುದ್ದಿನ್ ಮತ್ತು ಇವರ ಗಂಡನ ತಮ್ಮನ ಮಗ ಮಲ್ಲಿಕಾರವರನ್ನು ಕರೆದುಕೊಂಡು ಹೋಗಲು ಬಂದರು. ಮಗನನ್ನು ನೋಡಿದ ತಾಯಿ ದೂರದಿಂದ ಓಡಿ ಬಂದು ಮಗನನ್ನು ಕಣ್ಣೀರಿನಿಂದ ಅಪ್ಪಿಕೊಂಡರು ಎಂದರು.

2007ರಲ್ಲಿ ತಂದೆ ತೀರಿದ ನಂತರ ಕುಗ್ಗಿ ಹೋಗಿ ಮಾನಸಿಕ ಅಸ್ವಸ್ಥರಾದರು. 2008ರಲ್ಲಿ ಮನೆ ಬಿಟ್ಟು ಬಂದವರು ಮತ್ತೆ ವಾಪಸ್ ಬರಲೇ ಇಲ್ಲ. ಅನೇಕ ಕಡೆ ನಾವು ಹುಡುಕಿದೆವು ಆದರೆ ಎಲ್ಲಯೂ ಸಿಕ್ಕಲಿಲ್ಲ. ಒಂದು ದಿನ ನಮ್ಮ ತಾಯಿ ಸಿಗುತ್ತಾರೆ ಎಂಬ ಭರವಸೆ ನಮಗಿತ್ತು. ನನ್ನ ತಾಯಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ನನಗೆ ನನ್ನ ತಾಯಿಯನ್ನು ಊರಿಗೆ ಕರೆದುಕೊಂಡು ಹೋಗಲು ತುಂಬಾ ಸಂತೋಷವಾಗುತ್ತದೆ. ನಮ್ಮ ಊರಿನಲ್ಲಿ ನಮ್ಮ ತಾಯಿ ಸಿಕ್ಕಿದ್ದಾರೆ ಎಂದು ಎಲ್ಲರೂ ತುಂಬಾ ಸಂತೋಷದಲ್ಲಿದ್ದಾರೆ. ನನ್ನ ತಾಯಿಯನ್ನು ಇಷ್ಟು ವರ್ಷ ಸಾಕಿ ಪ್ರೀತಿಸಿ ಸಲಹಿದ ವಿಶ್ವಾಸದ ಮನೆಯ ಸಂಸ್ಥಾಪಕರಿಗೆ ಹಾಗೂ ಎಲ್ಲಾ ಸಿಬ್ಬಂದಿಯವರಿಗೆ ನನ್ನ ವಂದನೆಗಳು ಎಂದು ಮಗನಾದ ತಹಜುದ್ದಿನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾ ಬೆಗಂ, ತಹಜುದ್ದೀನ್‌, ಸಂಸ್ಥೆಯ ಉಪಾಧ್ಯಕ್ಷ ಮಾಥ್ಯು ಕೆಸ್ತಲಿನೋ, ವಕೀಲ ದೇವಿನ್‌ ಶೆಟ್ಟಿ ಉಪಸ್ಥಿತರಿದ್ದರು.


Spread the love