
ಶತಮಾನೋತ್ಸವ ಆಚರಣೆಯ ಮಂಗಳೂರು ಶಾರದೆಯ ಬ್ರಹತ್ ವಿಸರ್ಜನಾ ಮೆರವಣಿಗೆಯೊಂದಿಗೆ ಸಮಾಪನ
ಮಂಗಳೂರು: ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಅತೀ ಪ್ರಸಿದ್ಧ್ದವಾದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ ೧೦೦ನೇ ವರ್ಷದ ಕಾರ್ಯಕ್ರಮಗಳನ್ನು ಎಂದಿನoತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ನೂತನ ವಸಂತ ಮಂಟಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದೊಂದಿಗೆ ಗುರುವಾರದಂದು ಬ್ರಹತ್ ಶೋಭಾಯಾತ್ರೆಯ ಬಳಿಕ ಶ್ರೀ ಮಾತೆಯ ವಿಗ್ರಹವನ್ನು ಮಹಾಮಯಾ ತೀರ್ಥದಲ್ಲಿ ವಿಸರ್ಜನೆ ನಡೆಯಿತು . ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವತ್ ಭಕ್ತರು ತನು-ಮನ-ಧನಗಳಿಂದ ಪಾಲುಗೊಂಡು ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು .
ಜಗತ್ತಿಗೆ ಜ್ಞಾನದ ರೂಪದಲ್ಲಿ ಪ್ರತ್ಯಕ್ಷವಾಗಿರುವ, ವೀಣೆ, ವೇದ ಮತ್ತು ಸ್ಪಟಿಕ ಜಪಮಾಲೆಗಳನ್ನು ತನ್ನ ಕೈಯಲ್ಲಿ ಹಿಡಿದಿರುವ, ವರ್ಣದಲ್ಲಿ ಶುಭ್ರವಾದ, ಮೊದಲ ಮತ್ತು ಅಗ್ರಗಣ್ಯವಾದ ದೈವಿಕ ಶಕ್ತಿಯಾದ ಶ್ರೀ ಸರಸ್ವತಿ ದೇವಿಯಲ್ಲಿ ನಮ್ಮೆಲ್ಲರಿಗೆ ಆಶೀರ್ವಾದ ಮತ್ತು ಅವಳಲ್ಲಿ ನಮ್ಮೆಲ್ಲರ ಅಜ್ಞಾನವನ್ನು ಹೋಗಲಾಡಿಸಿ ಬುದ್ಧಿಶಕ್ತಿಯನ್ನು ದಯಪಾಲಿಸಿ ನಮ್ಮಮ್ಮ ಶಾರದೆ ನಮ್ಮೆಲ್ಲರ ಮನೆಯ ಬೆಳಕಾಗಲೆಂಬ ಪ್ರಾರ್ಥನೆಯೊಂದಿಗೆ, ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಆಚಾರ್ಯರ ಮಠದ ವಸಂತ ಮಂಟಪದಲ್ಲಿ ಕಳೆದ ಒಂದು ಶತಮಾನಗಳಿಂದ ಪೂಜಿಸಿ, ನಡೆಸಿಕೊಂಡು ಬಂದಿರುವ೦ತಹ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನೋತ್ಸವದ ಸಂಭ್ರಮ ಹಾಗೂ ನಮಗೆಲ್ಲರಿಗೂ ಬಹಳ ಹರ್ಷವಾಗುತ್ತದೆ.
ಭಾರತ ದೇಶದ ಈ ಪ್ರದೇಶದ ಸತ್ಪçಜೆಗಳನ್ನು ಏಕೀಕರಿಸುವ ಉದ್ದೇಶದಿಂದ ಜಿ.ಎಸ್.ಬಿ. ಸಮಾಜದ ಹಿರಿಯ ವೈದಿಕರು, ಭಾಂಧವರ ವಿಶಾಲ ದೃಷ್ಟ್ಟಿಕೋನ ಹಾಗೂ ದೂರದರ್ಶಿತ್ವದ ಕಲ್ಪನೆಯ ಕೂಸು ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ, ಅಂದಿನಿ೦ದ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಮಣ್ಣಿನಲ್ಲಿ ಜೀವಂತಗೊಳಿಸಿ ಪೂಜಿಸಲು ಪ್ರಾರಂಭವಾಯಿತು. ಇಂದಿಗೆ ಈ ಉತ್ಸವ ಬೆಳೆದು ಸಮಾಜದ ಎಲ್ಲಾ ವರ್ಗದವರ ಸಹಕಾರದೊಂದಿಗೆ ಈ ವರ್ಷ ಶತಮಾನೋತ್ಸವ ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ.
ಹತ್ತು ದಿನಗಳ ಪರ್ಯಂತ ಶ್ರೀ ಮಾತೆಯ ವಿಗ್ರಹಕ್ಕೆ ವಿವಿಧ ದೇವಿಯ ಅವತಾರಗಳ ಅಲಂಕಾರಗಳು ನಡೆದವು , ಸಹಸ್ರಾರು ಭಜಕರು ಕುಂಕುಮಾರ್ಚನೆ ಸೇವೆ , ರಂಗ ಪೂಜೆ , ಸಹಸ್ರ ಚಂಡಿಕಾ ಮಹಾ ಯಾಗ , ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿಂದ ಜರಗಿದವು .
ವಿಜಯದಶಮಿಯ ಪರ್ವ ದಿನದಂದು ವಿಸರ್ಜನಾ ಪೂಜೆ ನಡೆದು ಗುರುವಾರದಂದು ಬೆಳಿಗ್ಗಿನಿಂದ ಸರಸ್ವತಿ ಕಲಾ ಮಂಟಪದಲ್ಲಿ ಸೇವಾರೂಪದಲ್ಲಿ ಪ್ರತಿವರ್ಷ ಶಾರದಾ ಹುಲಿವೇಷದಾರಿಗಳಿಂದ ಹುಲಿವೇಷ ಕುಣಿತ ನಡೆಯಿತು . ರಾತ್ರಿ ಮಹಾ ಮಂಗಳಾರತಿಬಳಿಕ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ಬಳಿಕ ರಾತ್ರಿ ೧೦.೦೦ ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆಯು ಉತ್ಸವಸ್ಥಾನದಿಂದ ಹೊರಟು ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನ ಗುಡಿ, ಚಾಮರಗಲ್ಲಿ ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ , ಸ್ವಯಂಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು , ವಿವಿಧ ವೇಷದಾರಿಗಳಿಂದ ವಿಶೇಷ ಟ್ಯಾಬ್ಲೋಗಳು , ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು .
ಈ ಸಂದರ್ಭದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ . ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ ಶತಮಾನೋತ್ಸವ ಸಮಿತಿ ಯ ಪದಾಧಿಕಾರಿಗಳು, ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ , ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ