
ಶಾಂತಿಯುತ ವಿಧಾನಸಭಾ ಚುನಾವಣೆಗಾಗಿ ಉಡುಪಿ ನಗರದಲ್ಲಿ ಪೊಲೀಸರಿಂದ ಪಥಸಂಚಲನ
ಉಡುಪಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಸಶಸ್ತ್ರ ಪಡೆ, ಅರೆಸೇನಾ ಪಡೆ ತುಕಡಿಗಳು, ಪೊಲೀಸರು, ಪೊಲೀಸರ ತಂಡದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಪಥ ಸಂಚಲನ ನಡೆಯಿತು.
ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆಗಾಗಿ ಸಶಸ್ತ್ರ ಪಡೆ, ಅರೆಸೇನಾ ಪಡೆ, ತಮಿಳುನಾಡು, ಮಹರಾಷ್ಟ್ರ ಪೊಲೀಸರು, ಉಡುಪಿ ಪೊಲೀಸರು ಅಣಿಯಾಗಿವೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ನೇತೃತ್ವದಲ್ಲಿ ಬನ್ನಂಜೆ ನಾರಾಯಣ ಗುರು ಸಭಾ ಭವನದಿಂದ ಆರಂಭಗೊಂಡು ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆಎಂ ಮಾರ್ಗದ ಮೂಲಕ ಸಾಗಿ ಶೋಕಮಾತಾ ಚರ್ಚ್ ಬಳಿ ಸಮಾಪನಗೊಂಡಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ್ ಪಿಕೆ ಉಡುಪಿ ಪೊಲೀಸ್ ನೀರಿಕ್ಷಕ ಮಂಜಪ್ಪ ಡಿ ಆರ್, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ ಎಂ, ಮಣಿಪಾಲ ನಿರೀಕ್ಷಕ ದೇವರಾಜ ಟಿವಿ ಹಾಗೂ ಇತರರು ಉಪಸ್ಥಿತರಿದ್ದರು.