ಶಾಖೆಗಳನ್ನು ಸದೃಢ ಮಾಡಿದರೆ‌ ಮಾತ್ರ ಸಹಕಾರಿ‌ ಕ್ಷೇತ್ರ ಬೆಳೆಯಲು ಸಾಧ್ಯ – ಎಮ್.ಎನ್ ರಾಜೇಂದ್ರ ಕುಮಾರ್‌

Spread the love

ಶಾಖೆಗಳನ್ನು ಸದೃಢ ಮಾಡಿದರೆ‌ ಮಾತ್ರ ಸಹಕಾರಿ‌ ಕ್ಷೇತ್ರ ಬೆಳೆಯಲು ಸಾಧ್ಯ – ಎಮ್.ಎನ್ ರಾಜೇಂದ್ರ ಕುಮಾರ್‌

ಕುಂದಾಪುರ: ಶಾಖೆಗಳನ್ನು ಸದೃಢ ಮಾಡಿದರೆ‌ ಮಾತ್ರ ಸಹಕಾರಿ‌ ಕ್ಷೇತ್ರ ಬೆಳೆಯಲು ಸಾಧ್ಯವಿದೆ ಎಂದು ಅಧಿಕಾರ ಹಿಡಿದ ಆರಂಭದಲ್ಲೇ ತಿಳಿದುಕೊಂಡಿದ್ದೆ. ಡಿಸಿಸಿ ಬ್ಯಾಂಕ್ ಗೆ ಸಾಲ ಕೊಡುವಷ್ಟರ ಮಟ್ಟಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಸೆಟೆದು ನಿಂತಿವೆ. ಸಹಕಾರಿ ಕ್ಷೇತ್ರ ಜನರ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ಮರವಂತೆ ಬಡಾಕೆರೆ ವ್ಯವಸಾಯವ ಸೇವಾ ಸಹಕಾರಿ ಸಂಘದ ನಾಲ್ಕು ಶಾಖೆಗಳು ಸ್ವಂತ ಕಟ್ಟಡ ಹೊಂದಿ ಜನರ ನಂಬಿಕೆಗೆ ಪಾತ್ರವಾಗಿದೆ‌. ಈ ಸಂಘವು ಆರ್ಥಿಕತೆಯ ಜೊತೆಗೆ ಸಾಲದ ಬಡ್ಡಿ ದರವನ್ನು ಸ್ವಲ್ಪ‌ ಕಡಿಮೆ‌ ಮಾಡಿ ಜನರನ್ನು ಬದುಕಿಸುವ ಕೆಲಸ ಮಾಡಬೇಕಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ‌ ಸಂಘದ ಅಧ್ಯಕ್ಷ ಎಮ್.ಎನ್ ರಾಜೇಂದ್ರ ಕುಮಾರ್‌ ನುಡಿದರು.

ಅವರು ಶುಕ್ರವಾರ ನಡೆದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ‌ ಇದರ‌ ಮರವಂತೆ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು‌.

ಸರಕಾರಿ ಇಲಾಖೆ ಮತ್ತು ಸಹಕಾರಿ‌ ಕ್ಷೇತ್ರಕ್ಕೆ ಸಾಕಷ್ಟು ವ್ಯಾತ್ಯಾಸಗಳಿವೆ. ಸರಕಾರಿ ಇಲಾಖೆಯಲ್ಲಿ ಸೌಲಭ್ಯಗಳು ನೇರವಾಗಿ ಜನಸಾಮಾನ್ಯರನ್ನು ತಲುಪುವುದಿಲ್ಲ. ಮಂಜುಗಡ್ಡೆಯಂತೆ ಒಬ್ಬರ ಕೈಯ್ಯಿಂದ ಇನ್ನೊಬ್ಬರ ಕೈಗೆ ಹೋಗುವಾಗ ಕರಗಿ ಖಾಲಿಯಾಗಿರುತ್ತದೆ‌‌‌. ಆದರೆ ಸಹಕಾರಿ ಕ್ಷೇತ್ರ ಹಾಗಲ್ಲ‌. ನೇರವಾಗಿ ಸೌಲಭ್ಯಗಳು ತಲುಪುವ ಕ್ಷೇತ್ರವಿದ್ದರೆ ಅದು ಸಹಕಾರಿ ಕ್ಷೇತ್ರ ಮಾತ್ರ ಎಂದು ಎಮ್.ಎನ್ ರಾಜೇಂದ್ರ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ವಿಧಾನಸಭಾ‌ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಹಕಾರಿ‌ ಕ್ಷೇತ್ರದಲ್ಲಿ ಜನಸಾಮಾನ್ಯರನ್ನು ಅಲೆದಾಡಿಸದೆ ಅತೀ‌ ಶೀಘ್ರವಾಗಿ ಸಾಲ ಕೊಡುವ ವ್ಯವಸ್ಥೆ ಇದೆ‌. ರಾಜಕೀಯ‌ ಕ್ಷೇತ್ರದಲ್ಲಿ ಕೇವಲ‌ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಕೆಲಸ ಆಗುತ್ತಿದೆ ಬಿಟ್ಟರೆ ಜನಮನ್ನಣೆ ಗಳಿಸಲು‌ ಸಾಧ್ಯವಿಲ್ಲ. ಆದರೆ ಜನಸಾಮಾನ್ಯರ ನೋವುಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸಹಕಾರ ನೀಡಿ, ಜನಮನ್ನಣೆ ಗಳಿಸುವ ಕ್ಷೇತ್ರವಿದ್ದರೆ ಅದು ಸಹಕಾರಿ ಕ್ಷೇತ್ರ ಮಾತ್ರ . ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಪೂಜಾರಿಯವರನ್ನು 35 ವರ್ಷಗಳಿಂದ ನೋಡುತ್ತಾ ಬಂದಿರುವೆ. ಸಹಕಾರಿ ಕ್ಷೇತ್ರದಲ್ಲಿ ಅವರು ನೀಡಿದ ಸೇವೆ ಅನನ್ಯ. ಅವರ ಬಗ್ಗೆ ಅಪಾರ ಗೌರವವಿದೆ. ಹೀಗೆಯೇ ಅವರು ಈ ಸೇವೆಯನ್ನು ಪ್ರಾಮಾಣಿಕವಾಗಿ ಮುಂದುವರೆಸಿದರೆ ಮುಂದೊಂದು ದಿನ ರಾಜು ಪೂಜಾರಿಯವರು ಉನ್ನತ ಸ್ಥಾನಮಾನಗಳನ್ನು ಅಲಂಕರಿಸುವುದರಲ್ಲಿ ಸಂದೇಹವೇ ಇಲ್ಲ‌. ರಾಜು ಪೂಜಾರಿಯವರಿಗೆ ರಾಜಕೀಯ ಕ್ಷೇತ್ರದಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಗೋದಾಮು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಾಜು ಪೂಜಾರಿಯವರು ಹುಟ್ಟೂರಲ್ಲೇ ಇಲ್ಲಿನ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಸುಸಜ್ಜಿತ ಕಟ್ಟಡ ವ್ಯವಸ್ಥಿತವಾಗಿ ತಲೆ ಎತ್ತಿ ನಿಂತಿದ್ದು, ಗ್ರಾಹಕ ಸೇವೆಗೆ ಬಿಟ್ಟುಕೊಟ್ಟಿದ್ದಾರೆ. ಆರ್ಥಿಕವಾಗಿ ಇಲ್ಲಿನ ಜನತೆಗೆ ಸಕಾಲದಲ್ಲಿ‌ ಸ್ಪಂದಿಸಿದ್ದೀರಿ. ಲಾಭದಲ್ಲಿರುವ ಸಂಘದ ಗದ್ದುಗೆ ಏರಿ ಆಡಳಿತ ನಡೆಸುವುದು ಸುಲಭ. ಆದರೆ ರಾಜು ಪೂಜಾರಿಯವರು ನಷ್ಟದಲ್ಲಿದ್ದ ಬ್ಯಾಂಕ್ ನ ಆಡಳಿತ ಚುಕ್ಕಾಣಿ ಹಿಡಿದು ಲಾಭದಾಯಕ ಬ್ಯಾಂಕ್ ಆಗಿ ಪರಿವರ್ತಿಸಿದ್ದಾರೆ‌. ಈ ಕಟ್ಟಡದ ಬೆಳವಣಿಗೆಯೇ ರಾಜು ಪೂಜಾರಿಯವರು ಬೆಳೆದು ಬಂದ ಹಾದಿ ತೋರಿಸುತ್ತಿದೆ ಎಂದರು.

ನಿವೃತ್ತ ಉಪನ್ಯಾಸಕ ಜನಾರ್ದನ ಮರವಂತೆ ಶುಭಶಂಸನೆಗೈದರು. ಉಡುಪಿ ಜಿಲ್ಲಾ ಸಹಕಾರಿ‌ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ ಮಾತನಾಡಿದರು.

ಸನ್ಮಾನ: ಸಂಘದ ಅಭಿವೃದ್ದಿಗೆ ಸಹಕರಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್ ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ ಜನಾರ್ದನ ಮರವಂತೆ ಸಾಹಿತ್ಯದ ಡಾ. ರಾಜೇಂದ್ರ ಕುಮಾರ್ ಅವರ ಪರಿಚಯವನ್ನು ಯಕ್ಷಗಾನ‌ ದಾಟಿಯಲ್ಲೇ ಪ್ರಸ್ತುತಪಡಿಸಿದ್ದು ಸಮಾರಂಭದಲ್ಲಿ ಗಮನ ಸೆಳೆಯಿತು. ಕರಾವಳಿಯ ಜನಪದ ಕಲೆ ಯಕ್ಷಗಾನ‌ದ ಕಿರೀಟ ಮುಡಿಗೇರಿಸಿ ಸಹಕಾರಿ‌ಕ್ಷೇತ್ರದ ಅರ್ಜುನನಂತೆ ವಿಶಿಷ್ಟವಾಗಿ ಡಾ. ಎಮ್ ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇಪ್ಪತ್ತೇಳು ವರ್ಷಗಳ ಸುದೀರ್ಘ ಅಧ್ಯಕ್ಷ ಸ್ಥಾನವನ್ನು ವಹಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ ಎಸ್ ರಾಜು ಪೂಜಾರಿ ಅವರನ್ನು ಊರ ಗ್ರಾಮಸ್ಥರು ಸನ್ಮಾನಿಸಿದರು. ಬ್ಯಾಂಕ್ ಆರಂಭದಿಂದಲೂ ಮಾರ್ಗದರ್ಶ ನೀಡುತ್ತಾ ಬಂದಿರುವ ಪ್ರಾಥಮಿಕ ಹಂತದಿಂದಲೂ‌ಸಂಘದ ಸದಸ್ಯರಾಗಿದ್ದ ಜನಾರ್ದನ‌ ಮರವಂತೆ ಅವರನ್ನು ಸನ್ಮಾನಿಸಲಾಯಿತು.

ಸಂಘದ ಯಶಸ್ಸಿಗೆ ಕಾರಣೀಕರ್ತರಾದ ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ‌ ಕಾರ್ಯನಿರ್ವಣಾಧಿಕಾರಿಗಳನ್ನು ಗೌರವಿಸಲಾಯಿತು.

ಅಧ್ಯಕ್ಷ ಎಸ್ ರಾಜು ಪೂಜಾರಿ ಪ್ರಸ್ತಾಪಿಸಿ ಸ್ವಾಗತಿಸಿದರು. ನಿರ್ದೇಶಕ ವಿನಾಯಕ ರಾವ್ ಧನ್ಯವಾದವಿತ್ತರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.


Spread the love