ಶಾಲಿನಿ ರಜನೀಶ್‌ಗೆ ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್

Spread the love

ಶಾಲಿನಿ ರಜನೀಶ್‌ಗೆ ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್

ಬೆಂಗಳೂರು: ಭಾರತ ಸಿ.ಎಸ್.ಆರ್ ವತಿಯಿಂದ ಕೊಡಮಾಡುವ ಪ್ರತಿಷ್ಟಿತ “ಇಂಡಿಯಾ ಸಿ.ಎಸ್.ಆರ್. ಇಂಪ್ಯಾಕ್ಟ್ ಪ್ರೋಗ್ರಾಂ ಅವಾರ್ಡ್” ಗೆ ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭಾಜನರಾಗಿದ್ದಾರೆ.

ನವದೆಹಲಿಯ ಸಿರಿ ಇನ್ಸ್ಟಿಟ್ಯೂಷನಲ್ ಏರಿಯಾದ ಮೋದಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಭಾರತ ಸಿಎಸ್‌ಆರ್ ವತಿಯಿಂದ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿ ಇದಾಗಿದ್ದು, 13ನೇ ಭಾರತ ಸಿಎಸ್‌ಆರ್ ಮುಂದಾಳತ್ವದ ಶೃಂಗಸಭೆಯಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗಿದೆ.

ಪ್ರತಿ ವರ್ಷ ಭಾರತದ ಸಿಎಸ್‌ಆರ್ ಮುಂದಾಳತ್ವದ ಶೃಂಗಸಭೆಯನ್ನು ನಡೆಸುತ್ತಾ ಬರಲಾಗುತ್ತಿದ್ದು, ಇದು ದೇಶದ ಆರ್ಥಿಕತೆ ಹಾಗೂ ಮೂಲ ಸೌಕರ್ಯದ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಾರ್ಪೋರೇಟ್ ಕಂಪನಿಗಳು ಸರ್ಕಾರಗಳ ಜತೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲು ಸಿಎಸ್‌ಆರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಶೃಂಗಸಭೆಯಲ್ಲಿ ಸಾಮಾಜಿಕ ಒಳಿತಿಗಾಗಿ ಒಮ್ಮುಖವಾಗಿ ಪ್ರಯತ್ನಿಸುವುದು ಸೇರಿದಂತೆ ಸಂಭಾವ್ಯ ಅವಕಾಶಗಳು ಮತ್ತು ಅಸ್ತಿತ್ವದಲ್ಲಿರುವ ಸವಾಲುಗಳನ್ನು ಅನ್ವೇಷಿಸುವತ್ತ ಗಮನ ಹರಿಸಲಾಗುತ್ತದೆ.

ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕರ್ನಾಟಕದಲ್ಲಿ ಸಿಎಸ್‌ಆರ್ ನಿಧಿಯ ಸಮರ್ಪಕ ಬಳಕೆಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ಯೋಜನಾ ಇಲಾಖೆಯ ಮಾರ್ಗದರ್ಶನದಲ್ಲಿ ಯುಎನ್‌ಡಿಪಿ, ಎಸ್‌ಡಿಜಿಸಿಸಿ ಸಹಯೋಗದಲ್ಲಿ “ಆಕಾಂಕ್ಷ” ವೇದಿಕೆಯನ್ನು ಹುಟ್ಟುಹಾಕಲಾಗಿತ್ತು. ಇದು ಸಿಎಸ್‌ಆರ್ ನಿಧಿ ಬಳಕೆಯ ಒಂದು ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. 2021ರ ಮೇ 26ರಂದು ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ನೀತಿ ಆಯೋಗದ ಸಿಇಒ ಅವರು ಈ ಈ ಆನ್‌ಲೈನ್ ವೇದಿಕೆಗೆ ಚಾಲನೆ ನೀಡಿದ್ದರು.

ರಾಜ್ಯದಲ್ಲಿ ಈಗಾಗಲೇ ಆಕಾಂಕ್ಷ ವೇದಿಕೆ ಮೂಲಕ ಕಾರ್ಪೊರೇಟ್ ಕಂಪನಿಗಳು ರಾಜ್ಯದ ವಿವಿಧ ಆದ್ಯತೆಗಳಿಗೆ ಕೈಜೋಡಿಸಿವೆ. ಇದುವರೆಗೆ 300ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಯಾವ ಯಾವ ಜಿಲ್ಲೆಗಳು ಸೇರಿದಂತೆ ಯಾವ ಪ್ರದೇಶದಲ್ಲಿ ಯಾವ ಮೂಲ ಸೌಕರ್ಯದ ಅವಶ್ಯಕತೆ ಇದೆ ಎಂಬುದನ್ನು ಈ ವೇದಿಕೆ ಮೂಲಕ ಒಪ್ಪಂದ ಮಾಡಿಕೊಂಡು ಅನುಷ್ಠಾನ ಮಾಡುತ್ತಿವೆ.

ಆಕಾಂಕ್ಷ ಆನ್‌ಲೈನ್ ವೇದಿಕೆಯು ಪಾರದರ್ಶಕತೆಯನ್ನು ಕಾಯ್ದುಕೊಂಡಿದೆಯಲ್ಲದೆ, ಉತ್ತರದಾಯಿತ್ವವನ್ನು ಹೊಂದಿದೆ. ಹೀಗಾಗಿ ಸಿಎಸ್ ಆರ್ ಅಡಿ ಸಂಗ್ರಹವಾದ ಹಣದ ಬಳಕೆಯ ಖರ್ಚು, ಭೌಗೋಳಿಕ ಪ್ರದೇಶ, ವಲಯವನ್ನೊಳಗೊಂಡಸಂಪೂರ್ಣ ಮಾಹಿತಿಗಳನ್ನು ಈ ಸಾರ್ವಜನಿಕ ಡೊಮೇನ್ ಮೂಲಕ ಪಡೆದುಕೊಳ್ಳಬಹುದಾಗಿದೆ.


Spread the love