ಶಾಲೆಗಳಲ್ಲಿ ಧ್ಯಾನ ಅಳವಡಿಕೆ: ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ – ಡಾ. ಪಿವಿ ಭಂಡಾರಿ

Spread the love

ಶಾಲೆಗಳಲ್ಲಿ ಧ್ಯಾನ ಅಳವಡಿಕೆ: ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ – ಡಾ. ಪಿವಿ ಭಂಡಾರಿ

ಉಡುಪಿ: ಶಾಲೆಗಳಲ್ಲಿ ಧ್ಯಾನ ಅಳವಡಿಕೆಗೆ ಆದೇಶ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಆದೇಶವನ್ನು ಮನೋವೈದ್ಯ ಡಾ. ಪಿವಿ ಭಂಡಾರಿ ವಿರೋಧಿಸಿದ್ದಾರೆ,

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ವೈಜ್ಞಾನಿಕ ಆಧಾರ ಇರಬೇಕು. ಮೊಬೈಲ್ ಚಟದಿಂದ ಮಕ್ಕಳ ಏಕಾಗ್ರತೆ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಆದರೆ ಶಾಲೆಗಳನ್ನು ಬಹಳಷ್ಟು ದಿನ ಮುಚ್ಚಿಟ್ಟ ಪರಿಣಾಮ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಿದೆ. ಶಾಲೆ ತೆಗೆಯಿರಿ ಎಂದು ಯುನಿಸೆಫ್ ಹೇಳಿದಾಗಲೂ ಶಾಲೆ ಮುಚ್ಚಿದರು. ಇಂದಿನ ಮಕ್ಕಳ ಮೊಬೈಲ್ ಗೀಳಿಗೆ ಆನ್ಲೈನ್ ಶಿಕ್ಷಣವೇ ಕಾರಣವಾಗಿದೆ.

ಮಕ್ಕಳಿಗೆ ಅಗತ್ಯವಿರುವುದು ಧ್ಯಾನದ ಬದಲು ಸರಿಯಾದ ಕೌನ್ಸಿಲಿಂಗ್ ಆದ್ದರಿಂದ ಶಾಲೆಗಳಲ್ಲಿ ಸರಕಾರ ಕೌನ್ಸಿಲರ್ ಗಳನ್ನ ನೇಮಕ ಮಾಡಬೇಕು. ಶಾಲೆಗಳಲ್ಲಿ ಮಕ್ಕಳ ಸಮಸ್ಯೆಗಳಿಗೆ ಕೌನ್ಸಿಲಿಂಗ್ ಮೂಲಕ ಪರಿಹಾರ ಸಿಗಬೇಕು. ಶಿಕ್ಷಣದ ಮಾರ್ಗಸೂಚಿಗಳಲ್ಲಿ ಧ್ಯಾನ ಮಾಡಬೇಕೆಂದು ಎಲ್ಲೂ ಸೂಚಿಸಿಲ್ಲ. ಸರಕಾರ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ಧ್ಯಾನ ಮಾಡಲು ಸೂಚಿಸಿದ್ದಾರೆ. ಶಿಕ್ಷಣ ಸಚಿವರು ಮತ್ತು ಸರ್ಕಾರ ಜವಾಬ್ದಾರಿ ಮರೆಯುತ್ತಿದೆ. ಯಾಕೆ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದಾರೆ ಎಂದು ಮೊದಲು ಗಮನಿಸಬೇಕು.

ಈ ಬಗ್ಗೆ ಮನೋರೋಗ ತಜ್ಞರು ಮನೋವೈದ್ಯಕೀಯ ಸಂಘಗಳು ಅನೇಕ ಬಾರಿ ಮಾತನಾಡಿವೆ ಆದರೆ ಸರಕಾರ ಯಾವುದೇ ಮನೋರೋಗ ತಜ್ಞರನ್ನು ಕೇಳಿ ಈ ನಿರ್ಧಾರ ಮಾಡಿಲ್ಲ. ವೈಜ್ಞಾನಿಕ ಆಧಾರವಿಲ್ಲದೆ ಸರಕಾರ ಈ ರೀತಿ ನಿರ್ಧಾರ ಕೈಗೊಳ್ಳುತ್ತಿದೆ.

ಹತ್ತು ನಿಮಿಷದ ಧ್ಯಾನದಿಂದ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ಸಿಸಿದ ಡಾ| ಭಂಡಾರಿ ಸುಮ್ಮನೆ ಜನರನ್ನು ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ. ಸಚಿವರೇ ಸಮಸ್ಯೆಯ ಬುಡವನ್ನು ಮೊದಲು ಹುಡುಕಿ ಅದರ ಬದಲು ಕೇವಲ ತೋರ್ಪಡಿಕೆಯ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳಿಗೆ ವೈಜ್ಞಾನಿಕ ತಳಹದಿ ಬೇಕು. ಮೊಟ್ಟೆ ಕೊಡುವ ವಿಚಾರದಲ್ಲೂ ನಾವು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ದೇಶಾದ್ಯಂತ ತಜ್ಞರು ಮೊಟ್ಟೆ ನೀಡಬೇಕು ಎಂದು ಹೇಳುತ್ತಿದ್ದರು. ತಜ್ಞರ ಅಭಿಪ್ರಾಯ ಪಡೆಯದೆ ಕೇವಲ ಸಸ್ಯಹಾರಿ ಆಹಾರ ಮಾತ್ರ ಮಕ್ಕಳಿಗೆ ಯೋಗ್ಯ ಎಂದು ನಿರ್ಧರಿಸಿದ್ದರು

10 ನಿಮಿಷದ ಧ್ಯಾನದಿಂದ ಮಕ್ಕಳ ಒತ್ತಡ ಕಡಿಮೆಯಾಗುವುದಿದ್ದರೆ ಮಾಡಿ ಆದರೆ ನಾನು ವಿರೋಧ ಮಾಡುತ್ತಿರುವುದು ರಾಜಕೀಯ ಕಾರಣಗಳಿಗೆ ಅಲ್ಲ. ಹಿಂದಿನ ಸರಕಾರಗಳು ಇದ್ದಾಗ ಕೂಡ ಜನರ ಆರೋಗ್ಯ ಮಕ್ಕಳ ಶಿಕ್ಷಣದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಾಗ ಟೀಕಿಸಿದ್ದೆ. ಮಕ್ಕಳಿಗೆ ಧ್ಯಾನಕ್ಕೆ ಸೂಚಿಸುವುದರ ಬದಲಾಗಿ ಮಾಡುವ ಕೆಲಸಗಳು ಬೇಕಷ್ಟಿವೆ. ಎಷ್ಟು ಶಾಲೆಗಳಲ್ಲಿ ವಿದ್ಯಾರ್ಥಿ ಆಪ್ತ ಸಮಾಲೋಚಕರು ಇದ್ದಾರೆ? ಮಕ್ಕಳ ಮಾನಸಿಕ ಸಮಸ್ಯೆ ಕಡಿಮೆ ಮಾಡಲು ಆಟೋಟಗಳನ್ನು ವ್ಯವಸ್ಥೆ ಮಾಡಬೇಕು. ಪಿಯುಸಿ ಕಾಲೇಜಿನಲ್ಲಿ ಆಟೋಟಕ್ಕೆ ಯಾವುದೇ ಪ್ರೋತ್ಸಾಹ ಇಲ್ಲ ದಿನವಿಡೀ ಶಿಕ್ಷಣದಲ್ಲೆ ವಿದ್ಯಾರ್ಥಿಗಳು ಮುಳುಗಿರುತ್ತಾರೆ. ಸಂಜೆಯ ಬಳಿಕ ಪಿಯುಸಿ ಮಕ್ಕಳಿಗೆ ಸಿಇಟಿ , ನೀಟ್ ತರಗತಿಯ ಒತ್ತಡಗಳಿವೆ. ಮಕ್ಕಳಿಗೆ ಮಾನಸಿಕ ಒತ್ತಡ ನೀಡದಂತೆ ಶಿಕ್ಷಣ ರೂಪಿಸುವುದು ಸರಕಾರಕ್ಕೆ ಬೇಕಾಗಿಲ್ಲ ಜನರಿಗೆ ಶೋ ಆಫ್ ಮಾಡಲು ಸರಕಾರ ಈ ರೀತಿ ನಿರ್ಧಾರ ಕೈಗೊಂಡಿದೆ ಎಂದರು.

ಒಂದು ವೇಳೆ ಶಿಕ್ಷಕರೇ ಧ್ಯಾನ ನಡೆಸಲು ಸೂಚಿಸಿದ್ದರೆ ನಾನು ಸ್ವಾಗತಿಸುತ್ತೇನೆ. ಇದು ವೈಜ್ಞಾನಿಕವೇ ಎಂಬುದಷ್ಟೇ ನಮ್ಮ ಪ್ರಶ್ನೆ? ನಾನಂತೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿರೋಧ ವ್ಯಕ್ತಪಡಿಸುತ್ತಿಲ್ಲ ಸರಕಾರದ ನಿರ್ಧಾರಗಳು ಮತ್ತು ಅದನ್ನು ವಿರೋಧಿಸುವವರಿಗೆ ಏನಾದರೂ ಅಜೆಂಡ ಇರುತ್ತೆ ಯಾರಿಗೂ ಜನರ ಅಥವಾ ಮಕ್ಕಳ ಹಿತಾಸಕ್ತಿ ಬೇಕಾಗಿಲ್ಲ ಎಂದರು


Spread the love