ಶಾಸಕ ಪೂಂಜಾ ಮೇಲಿನ ದಾಳಿ ಯತ್ನದ ಬಗ್ಗೆ ಸಮಗ್ರ ತನಿಖೆ ನಡೆಯಲಿ – ಶ್ರೀಶ ನಾಯಕ್ ಪೆರ್ಣಂಕಿಲ

Spread the love

ಶಾಸಕ ಪೂಂಜಾ ಮೇಲಿನ ದಾಳಿ ಯತ್ನದ ಬಗ್ಗೆ ಸಮಗ್ರ ತನಿಖೆ ನಡೆಯಲಿ – ಶ್ರೀಶ ನಾಯಕ್ ಪೆರ್ಣಂಕಿಲ

ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ನಡೆದ ತಲವಾರು ದಾಳಿ ಯತ್ನವನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಅವರು ಖಂಡಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಗೃಹ ಸಚಿವರು ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹರೀಶ್ ಪೂಂಜಾ ಅವರ ತಾಕತ್ತು ಏನು ಎನ್ನುವುದು ಬೆಳ್ತಂಗಡಿಯ ಪ್ರತಿ ಮನೆಯವರಿಗೂ ಗೊತ್ತಿದ್ದು, ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಹಾಗೂ ಅವರಲ್ಲಿನ ಅಚಲ ಹಿಂದುತ್ವದ ಧೋರಣೆಯನ್ನು ಸಹಿಸದ ಮತಾಂದ ಕಿಡಿಗೇಡಿಗಳು ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿದ್ದು ಅಂತಹವರನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದು ಕೂಡ ತಿಳಿದಿದೆ.

ತಾನು ಉಡುಪಿ ಜಿಲ್ಲಾ ಯುವ ಮೋರ್‍ಚಾ ಅಧ್ಯಕ್ಷನಾಗಿದ್ದ ವೇಳೆ ಮಂಗಳೂರು ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಪೂಂಜಾ ಅವರು ಯುವ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ರೀತಿ ಶ್ಲಾಘನೀಯವಾಗಿತ್ತು.

ಶಾಸಕ ಪೂಂಜಾ ಎಂದಿಗೂ ಏಕಾಂಗಿಯಲ್ಲ ಅವರೊಂದಿಗೆ ಉಡುಪಿ ಮಂಗಳೂರಿನ ದೇಶಭಕ್ತ ಜನತೆ ಇದ್ದು ದುಷ್ಕರ್ಮಿಗಳ ಗೊಡ್ಡು ತಲವಾರು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಪ್ರಕರಣವನ್ನು ಗೃಹಸಚಿವರು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತವಾದ ತನಿಖೆ ನಡೆಸುವಂತೆ ಶ್ರೀಶ ನಾಯಕ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love