ಶಿಂಷಾ ನದಿಯ ಅಕ್ರಮ ಮರಳು ದಂಧೆಗಿಲ್ಲ ಕಡಿವಾಣ

Spread the love

ಶಿಂಷಾ ನದಿಯ ಅಕ್ರಮ ಮರಳು ದಂಧೆಗಿಲ್ಲ ಕಡಿವಾಣ

ಭಾರತೀನಗರ: ಸಮೀಪದ ಕೊಕ್ಕರೆ ಬೆಳ್ಳೂರು ಬಳಿಯ ಶಿಂಷಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಒತ್ತಡದ ಮೇರೆಗೆ ಶಿಂಷಾ ನದಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಿಂಷಾ ನದಿಯಲ್ಲಿ ಮರಳುದಂಧೆ ನಡೆಸದಂತೆ ನಿಷೇಧಿಸಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು.

ಶಿಂಷಾ ನದಿಗೆ ಅಡ್ಡಲಾಗಿ ಬೆಳ್ಳೂರು ಬಳಿ ನಿರ್ಮಾಣ ಮಾಡಿರುವ ಸೇತುವೆಯ ಆಧಾರ ಕಂಬಗಳ ಬಳಿ ಮರಳನ್ನು ತೋಡಿ ಹಳ್ಳ ಮಾಡಿದ್ದು, ಸೇತುವೆ ಅಪಾಯದ ಅಂಚಿನಲ್ಲಿದೆ ಎಂಬ ಉದ್ದೇಶದಿಂದ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಾಲ್ಲೂಕು ಆಡಳಿತ ಮರಳು ದಂಧೆಕೋರರ ಮೇಲೆ ದಾಳಿ ನಡೆಸಿ 20 ಕ್ಕೂ ಹೆಚ್ಚು ಕೊಪ್ಪರಿಕೆಗಳನ್ನು ವಶಪಡಿಸಿಕೊಂಡಿತ್ತು.

ಇದಲ್ಲದೆ ಮರಳು ತೆಗೆಯಲು ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳಿಂದ ಬಂದಿದ್ದ ಹಲವಾರು ಮಂದಿಯ ಮೇಲೆ ಪ್ರಕರಣ ಕೂಡ ದಾಖಲಿಸಿತ್ತು. ನಂತರ ಇಲ್ಲಿಯ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ನೀಡುವ ವಸತಿ ಯೋಜನೆಯಡಿಯ ಮನೆಗಳನ್ನು ನಿರ್ಮಿಸಿಕೊಳ್ಳಲು ಮರಳಿನ ಅಗತ್ಯತೆ ತೀರಾ ಇದೆ. ಹಾಗಾಗಿ ಮರಳು ಸಾಗಣೆಗೆ ಅನುಮತಿ ನೀಡಬೇಕೇಂದು ಒತ್ತಡ ತಂದಿದ್ದರು. ಆ ನಂತರ ಕೇವಲ ಗೋಣಿ ಚೀಲಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಮಾತ್ರ ಮರಳು ತೀರಾ ಅಗತ್ಯವಿರುವವರು ತೆಗೆದುಕೊಂಡು ಹೋಗಲು ಆದೇಶಿಸಲಾಗಿತ್ತು.

ಕೆಲವು ದಿನಗಳ ಕಾಲ ಹಾಗೆಯೇ ತೀರಾ ಅಗತ್ಯವಿದ್ದವರು ಗ್ರಾಮ ಪಂಚಾಯಿತಿ ದೃಢೀಕರಣ ಪತ್ರದೊಂದಿಗೆ ಮರಳನ್ನು ಕೊಂಡೊಯ್ಯುತ್ತಿದ್ದರು. ಇದು ದಿನಕಳೆದಂತೆ ಎತ್ತಿನ ಗಾಡಿಗಗಳಲ್ಲಿ ಹತ್ತಾರು ಲಾರಿಗಳಷ್ಟು ಮರಳನ್ನು ಸಂಗ್ರಹಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವವರೆಗೂ ಬಂದು ನಿಂತಿದೆಯಲ್ಲದೆ, ಶಿಂಷಾನದಿಯಲ್ಲಿ ಮರಳು ತೆಗೆಯಲೇಂದೇ 30 ಹೆಚ್ಚು ಕೊಪ್ಪರಿಕೆಗಳನ್ನು ದಿನನಿತ್ಯ ಬಳಸಲಾಗುತ್ತಿದೆ.

ಬೆಳ್ಳೂರು ಸೇರಿದಂತೆ ಶಿಂಷಾ ನದಿ ದಂಡೆಯಲ್ಲಿ ಬರುವ ಗ್ರಾಮಗಳಲ್ಲಿ ರಾಜಾರೋಷವಾಗಿ ಮರಳು ದಂಧೆ ನಡೆಯುತ್ತಿದ್ದರೂ ಕೂಡ ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲೀ, ತಾಲ್ಲೂಕು ಆಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಹಲವು ದಶಕಗಳ ಕಾಲ ಜನರು ಶಿಂಷಾ ನದಿಯ ಪಶ್ಚಿಮ ದಿಕ್ಕಿನಿಂದ ಪೂರ್ವದ ಕಡೆಯಿರುವ ಕೊಕ್ಕರೆ ಬೆಳ್ಳೂರು, ಬನ್ನಹಳ್ಳಿ, ಅರೆತಿಪ್ಪೂರು, ಕೂಳಗೆರೆ ಸೇರಿದಂತೆ ಹಲಗೂರುವರೆಗಿನ ಗ್ರಾಮಗಳಿಗೆ ಯಾವುದೇ ಸಂಪರ್ಕ ಸೇತುವೆ ಇಲ್ಲದೆ ಪರಿತಪಿಸುತ್ತಿದ್ದರು.

ಆ ನಂತರದ ದಿನಗಳಲ್ಲಿ ಇಗ್ಗಲೂರು ಬ್ಯಾರೇಜ್ ನಿರ್ಮಾಣವಾಗಿದ್ದು, ನದಿಯಲ್ಲಿ ಹಿನ್ನೀರು ಹೆಚ್ಚಳವಾಗಿ ಯಾವುದೇ ರೀತಿಯಲ್ಲಿಯೂ ಒಂದೆಡೆಯಿಂದ ಮತ್ತೊಂಡೆಗೆ ಸಂಚರಿಸದಂತಾಯಿತು. ಬಳಿಕ ಸ್ಥಳೀಯರು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರಿಂದ ಸೇತುವೆ ನಿರ್ಮಾಣ ಮಾಡಲಾಯಿತು. ಶಿಂಷಾ ನದಿಯಲ್ಲಿ ಎಷ್ಟೇ ನೀರಿದ್ದರೂ ಕೂಡ ಅಕ್ರಮ ಮರಳು ದಂಧೆ ಮಾತ್ರ ನಿರಂತರವಾಗಿದ್ದು, ಸೇತುವೆ ಈಗಾಗಲೇ ಬಿರುಕು ಬಿಟ್ಟಿದ್ದು ಅಪಾಯದ ಅಂಚಿನಲ್ಲಿದೆ.

ಅಕ್ರಮ ಮರಳು ದಂಧೆ ಹೀಗೆ ಮುಂದುವರೆದಲ್ಲಿ 50 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಕಟ್ಟಲಾಗಿರುವ ಬೆಳ್ಳೂರು ಸೇತುವೆಗೆ ಅಪಾಯವಂತೂ ತಪ್ಪಿದಲ್ಲ. ಆದ್ದರಿಂದ ಈ ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾಗಿದೆ.


Spread the love