ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸಲು ಕಾರ್ಯಕರ್ತರ ಒತ್ತಾಯವಿದೆ – ಬಿ ವೈ ರಾಘವೇಂದ್ರ

Spread the love

ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸಲು ಕಾರ್ಯಕರ್ತರ ಒತ್ತಾಯವಿದೆ – ಬಿ ವೈ ರಾಘವೇಂದ್ರ

ಕುಂದಾಪುರ: ಯಡಿಯೂರಪ್ಪ ಅವರು ಚುನಾವಣೆ ರಾಜಕೀಯದಿಂದ ದೂರ ಸರಿಯುವ ತೀರ್ಮಾನ ತೆಗೆದುಕೊಂಡಿದ್ದು, ಶಿಕಾರಿಪುರ ಕ್ಷೇತ್ರದೊಂದಿಗೆ ಅವರಿಗೆ ಭಾವನಾತ್ಮಕ ಸಂಬಂಧವಿದೆ. ಈ ಬಾರಿ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿಸಲು ಕಾರ್ಯಕರ್ತರ ಒಕ್ಕೊರಲ ಒತ್ತಾಯವಾಗಿದ್ದು, ಯಡಿಯೂರಪ್ಪ ಅವರು ಕೂಡ ಈ ಬಗ್ಗೆ ಪಕ್ಷಕ್ಕೆ ವಿನಂತಿಸಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಸಷ್ಟಪಡಿಸಿದರು.

ತ್ರಾಸಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಓರ್ವ ಆದರ್ಶ ಕಾರ್ಯಕರ್ತರಾಗಿ ಬಿಜೆಪಿ ಪಕ್ಷ ಕಟ್ಟಿದವರಲ್ಲಿ ರೈತ ನಾಯಕ ಯಡಿಯೂರಪ್ಪ ಒಬ್ಬರು. ವ್ಯಕ್ತಿಗೋಸ್ಕರ ಪಕ್ಷವಲ್ಲ, ದೇಶಕ್ಕೋಸ್ಕರ ಪಕ್ಷ ಎಂಬ ಧ್ಯೇಯ ಅವರದ್ದಾಗಿದೆ. ಹೋರಾಟ, ಸಂಘಟನಾ ಚಾತುರ್ಯ ನೋಡಿ ಪಕ್ಷ ಎಲ್ಲವನ್ನೂ ನೀಡಿದೆ. ಇದರಿಂದ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಪಕ್ಷ ಮಾಡಿತ್ತು. ಈಗ ಪ್ರಧಾನಿ ಜೊತೆ ಕೂರುವ ಸಂಸದೀಯ ಮಂಡಳಿ ಸದಸ್ಯರಾಗಿ ಜವಬ್ದಾರಿ ಸಿಕ್ಕಿದೆ. ಬಿಜೆಪಿ ಪಕ್ಷ ಎಲ್ಲವನ್ನೂ ನೀಡಿದ್ದು, ಅವರನ್ನು ನಿರ್ಲಕ್ಷಿಸಿಲ್ಲ. ಜೀವನಪೂರ್ತಿ ಕೆಲಸ ಮಾಡಿದರೂ ಪಕ್ಷದ ಋಣ ತೀರಿಸಲಾಗಲ್ಲ ಎಂದರು.

ಜನಾರ್ಧನ ರೆಡ್ಡಿಯವರು ಇತ್ತೀಚೆಗಷ್ಟೇ ಪಕ್ಷ ಕಟ್ಟಿದ್ದು, ಪಕ್ಷದ ಆಗು- ಹೋಗುಗಳು ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಬೈಂದೂರಿನಲ್ಲೂ ಈಗ ಸಾಕಷ್ಟು ಆಕಾಂಕ್ಷಿಗಳಿದ್ದು, ಈ ಬಗ್ಗೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಜನಸಂಘದ ಕಾಲದಲ್ಲಿ ಚುನಾವಣೆಗೆ ಅಭ್ಯರ್ಥಿಯಾಗಲು ಕೈ ಹಿಡಿದು ಎಳೆದು ತರಬೇಕಿತ್ತು. ಈಗ ಸಹಜವಾಗಿಯೇ ಸ್ಪರ್ಧೆಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕೂಡ ಟಿಕೆಟ್ ಕೇಳಬಹುದು. ಆದರೆ ಒಮ್ಮೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಮೇಲೆ ಮೈಮನಸ್ಸಿನಲ್ಲದೇ ಕಾರ್ಯಕರ್ತರು ದುಡಿಯುತ್ತಾರೆ ಎಂದರು.

ನಂಜುಂಡಪ್ಪ ವರದಿ ಪ್ರಕಾರ ಬೈಂದೂರು ಅತ್ಯಂತ ಹಿಂದುಳಿದ ತಾಲೂಕು. ಈಗ ಡಬಲ್ ಎಂಜಿನ್ ಸರಕಾರವಿದೆ. ಯಡಿಯೂರಪ್ಪ ಹಾಗೂ ಪ್ರಸ್ತುತ ಬೊಮ್ಮಾಯಿ ಅವರಿಂದ, ಮೋದಿಯವರ ಆಶೀರ್ವಾದದಿಂದ ಸಾಕಷ್ಟು ಅನುದಾನ ಬರುತ್ತಿದೆ. ಹಾಗಾಗಿ ಅಭಿವೃದ್ಧಿ ವಿಚಾರಗಳಲ್ಲಿ ರಾಜಕಾರಣ ಬದಿಗಿಟ್ಟು ಬಂದಂತಹ ಅನುದಾನವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮೂರಿಗೆ ಆಸ್ತಿಯಾಗುತ್ತದೆ. ಇಲ್ಲಿ ಸೂಕ್ತ ಕಚೇರಿ ಇಲ್ಲ. ಕವಿ ಅಡಿಗರ ಹೆಸರಿನಲ್ಲಿ ಸುಸಜ್ಜಿತ ಪುರಭವನ ಆಗಬೇಕೆನ್ನುವ ಇಚ್ಛೆ ನಮ್ಮದು. ಸಂಸದರದ್ದಾಗಲಿ, ಶಾಸಕರದ್ದಾಗಲಿ ಹೆಸರು ಇಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವಿರೋಧ ಬೇಡ ಎಂದವರು ಹೇಳಿದರು.


Spread the love