ಶಿಕ್ಷಣವೆಂದರೆ ಒಳಗಿರುವ ಪರಿಪೂರ್ಣತೆಯನ್ನು ಹೊರತರುವುದು – ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ವಿವೇಕವಾಣಿ ಸರಣಿ ಉಪನ್ಯಾಸಗಳ 49ನೇ ಕಾರ್ಯಕ್ರಮವು ಉಡುಪಿ ಕಟಪಾಡಿಯ ತ್ರಿಶಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು “ಆತ್ಮವಿಶ್ವಾಸ ಮತ್ತು ಧೈರ್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅವರು ಮಾತನಾಡುತ್ತಾ, “ಜೀವನದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಮತ್ತು ಧೈರ್ಯ ಎಂಬ ಎರಡು ಮಹತ್ವದ ಶಕ್ತಿಗಳು ಅಗತ್ಯ. ಆತ್ಮವಿಶ್ವಾಸವಿಲ್ಲದೆ ಯಾರೂ ಮುಂದೆ ಸಾಗಲು ಸಾಧ್ಯವಿಲ್ಲ; ಧೈರ್ಯವಿಲ್ಲದೆ ಯಾವುದೇ ಗುರಿಯನ್ನು ಸಾಧಿಸಲಾಗದು,” ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸಿ, “ಪರಿಪೂರ್ಣತೆ ನಮ್ಮೊಳಗೇ ಇದೆ, ಅದನ್ನು ಹೊರತರುವುದು ಶಿಕ್ಷಣದ ಉದ್ದೇಶ. ಇದೇ ನಂಬಿಕೆಯೇ ಆತ್ಮವಿಶ್ವಾಸದ ಮೂಲ,” ಎಂದು ಹೇಳಿದರು. ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತು, ಅಜ್ಞಾನ, ಭಯ ಮತ್ತು ನಕಾರಾತ್ಮಕ ಚಿಂತನೆಗಳ ವಿರುದ್ಧ ಹೋರಾಡಬೇಕು. ಇದೇ ‘ಶಕ್ತಿಬುದ್ಧಿಯ ವಿನ್ಯಾಸ’ ಎಂಬ ತತ್ತ್ವದ ಅರ್ಥ ಎಂದು ಅವರು ವಿವರಿಸಿದರು.
ಅವರ ಅಭಿಪ್ರಾಯದಲ್ಲಿ, ಜೀವನದ ಸವಾಲುಗಳು ಅಡೆತಡೆಗಳು ಅಲ್ಲ – ಅವು ಧೈರ್ಯವನ್ನು ಪರೀಕ್ಷಿಸುವ ಅವಕಾಶಗಳು. ಧೈರ್ಯಶಾಲಿಗಳು ಎಂದಿಗೂ ಸೋಲುವುದಿಲ್ಲ, ಏಕೆಂದರೆ ಅವರು ತಮ್ಮ ಮನಸ್ಸನ್ನು ಗೆದ್ದವರು. ಸ್ವಾಮಿ ವಿವೇಕಾನಂದರ “ಎದ್ದೇಳಿ, ಜಾಗೃತರಾಗಿ, ಗುರಿ ಸಾಧನೆವರೆಗೆ ನಿಲ್ಲಬೇಡಿ” ಎಂಬ ಸಂದೇಶವು ಪ್ರತಿಯೊಬ್ಬ ಯುವಕರ ಜೀವನದ ದೀಪವಾಗಬೇಕು ಎಂದು ಹೇಳಿದರು.
ಅವರು ಮುಂದುವರಿಸಿ, “ಜೀವನದ ನಿಜವಾದ ಅರ್ಥ ಸ್ವಂತಕ್ಕಾಗಿ ಬದುಕುವುದಲ್ಲ; ಇತರರ ಹಿತಕ್ಕಾಗಿ ಬದುಕುವವರೇ ನಿಜವಾದ ಜೀವಂತರು,” ಎಂದು ಹೇಳಿದರು. ಆತ್ಮವಿಶ್ವಾಸ ಮತ್ತು ಧೈರ್ಯದ ಹಾದಿಯಲ್ಲಿ ನಡೆಯುವ ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತು, ಸಮಾಜದ ಬಲವಾಗಿ ರೂಪುಗೊಳ್ಳುತ್ತಾರೆ. ಇಂತಹ ಚೈತನ್ಯಭರಿತ ಯುವಕರು ನಾಳಿನ ಭವಿಷ್ಯವನ್ನು ನಿರ್ಮಿಸುತ್ತಾರೆ,” ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಈ ಉಪನ್ಯಾಸ ಕಾರ್ಯಕ್ರಮವನ್ನು ಮೆಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಸಿ. ಎ. ಗೋಪಾಲಕೃಷ್ಣ ಭಟ್, ಪ್ರಾಂಶುಪಾಲರಾದ ಶ್ರೀ ವಿಘ್ನೇಶ್ ಶೆಣೈ ಬಿ, ಉಪನ್ಯಾಸಕರು ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿದರು, ತ್ರಿಶಾ ಕಾಲೇಜಿನ ಉಪನ್ಯಾಸಕರಾದ ಪ್ರೊ. ರಾಮದಾಸ್ ನಾಯ್ಕ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗಿರೀಷ್ಮಾ ಶೆಟ್ಟಿ ನಿರೂಪಿಸಿದರು. ನಮ್ಮ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಂದೀಶ್, ಅಭಿಲಾಷ್, ಜತಿನ್, ವೈಭವಿ, ಶಾರ್ವರಿ, ಸಿಂಚನ ಒಟ್ಟು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು