ಶಿಕ್ಷಣ ಹಾಗೂ ಭಾಷಾ ಜ್ಞಾನ ಇರುವವರಿಗೆ ಪ್ರಪಂಚದ ಎಲ್ಲಿಯೂ ಕೂಡ ನೆಮ್ಮದಿಯ ಬದುಕು – ಈಶಪ್ರೀಯ ತೀರ್ಥ ಸ್ವಾಮೀಜಿ

Spread the love

ಶಿಕ್ಷಣ ಹಾಗೂ ಭಾಷಾ ಜ್ಞಾನ ಇರುವವರಿಗೆ ಪ್ರಪಂಚದ ಎಲ್ಲಿಯೂ ಕೂಡ ನೆಮ್ಮದಿಯ ಬದುಕು – ಈಶಪ್ರೀಯ ತೀರ್ಥ ಸ್ವಾಮೀಜಿ

ಕುಂದಾಪುರ: ಸರಿಯಾದ ಶಿಕ್ಷಣ ಹಾಗೂ ಭಾಷಾ ಜ್ಞಾನ ಇರುವವರು ಪ್ರಪಂಚದ ಎಲ್ಲಿಯೂ ಕೂಡ ನೆಮ್ಮದಿಯ ಬದುಕನ್ನು ಸಾಧಿಸುತ್ತಾರೆ. ಗುರುಗಳಿಂದ ಸರಿಯಾದ ರೀತಿಯಲ್ಲಿ ಜ್ಞಾನಾರ್ಜನೆ ಪಡೆದುಕೊಳ್ಳುವ ವಿದ್ಯಾರ್ಥಿಗಳು, ವಿದ್ಯೆ ಸಂಪನ್ನರಾಗಿ ಜೀವನವನ್ನು ಜಯಿಸುತ್ತಾರೆ. ದೈವ ನಿರ್ಧಾರದಂತೆ ನಮಗೆ ಎಲ್ಲವೂ ದೊರಕುತ್ತದೆ ಎನ್ನುವ ಆಶಾವಾದದ ಜೊತೆಯಲ್ಲಿ ಸಾಧಿಸುವ ಪ್ರಾಮಾಣಿಕ ಪ್ರಯತ್ನವೂ ಬೇಕು ಎಂದು ಉಡುಪಿ ಅದಮಾರು ಮಠದ ಸ್ವಾಮೀಜಿ ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.

ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ಸರಸ್ವತಿ ದೇವಿಯ ಪುತ್ಥಳಿಯನ್ನು ಅನಾರಣಗೊಳಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದುಡ್ಡಿನಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಎನ್ನುವುದು ಭ್ರಮೆ. ಶಾಂತಿ, ನೆಮ್ಮದಿ, ಪ್ರೀತಿ, ಆರೋಗ್ಯ ಸೇರಿದಂತೆ ಹಲವು ಪ್ರಮುಖ ಸಂಗತಿಗಳಿಗೆ ದುಡ್ಡು ಬೇಕಿಲ್ಲ. ನಿದ್ರೆಯೂ ಕೂಡ ಮನುಷ್ಯನ ಒಂದು ಸಂಪತ್ತೇ, ಎಲ್ಲ ಸಂಪತ್ತುಗಳಿದ್ದರೂ, ಅತ್ಯಮೂಲ್ಯವಾದ ನಿದ್ರೆಯ ಸಂಪತ್ತಿನಿಂದ ವಂಚಿತರಾದ ಹಲವರು ನಮಗೆ ಕಾಣ ಸಿಗುತ್ತಾರೆ. ನಮ್ಮಲ್ಲಿ ಎಷ್ಟು ಸಂಪತ್ತು ಇದೆ ಎನ್ನುವುದಕ್ಕಿಂತ, ಇರುವ ಸಂಪತ್ತಿನ ಸದ್ವಿನಿಯೋಗದ ಕುರಿತು ಚಿಂತನೆ ಮಾಡಬೇಕು. ಸಂಪತ್ತು ಎಲ್ಲ ಕಾಲಕ್ಕೂ ಉಪಯೋಗಕ್ಕೆ ಬರೋದಿಲ್ಲ. ಕೆಲವೊಮ್ಮೆ ಅತಿಯಾದ ಸಂಪತ್ತು ಆಪತ್ತಿಗೂ ಕಾರಣವಾಗುತ್ತದೆ. ವಿದ್ಯೆ ಎನ್ನುವ ಅಮೂಲ್ಯವಾದ ಶಾಶ್ವತ ಸಂಪತ್ತು ನಮ್ಮೊಂದಿಗೆ ಇದ್ದಾಗ, ಎಲ್ಲ ಸಂಪತ್ತಿನ ಸರಿಯಾದ ಬಳಕೆಗೆ ಮಾರ್ಗದರ್ಶನ ದೊರಕುತ್ತದೆ ಎಂದರು.

ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್‍ನ ಜಂಟಿ ಕಾರ್ಯನಿರ್ವಾಹಣ ಟ್ರಸ್ಟಿಗಳಾದ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿಸಿಲ್ವ ಇದ್ದರು. ಗುರುಕುಲ ವಿದ್ಯಾ ಸಂಸ್ಥೆಯ ಶಿಕ್ಷಕ ತಿಲಕ್ ಮಾತನಾಡಿದರು. ಪುತ್ಥಳಿ ನಿರ್ಮಿಸಿದ ಕಲಾಕಾರ ವೇಣುಗೋಪಾಲ ಆಚಾರ್ಯ ಕಾಸರಗೋಡು ಅವರನ್ನು ಗೌರವಿಸಲಾಯಿತು.

ಅನುಪಮ ಶೆಟ್ಟಿ ಸ್ವಾಗತಿಸಿದರು, ಶಿಕ್ಷಕಿ ಪೂರ್ವಿಕಾ ಪ್ರಾರ್ಥಿಸಿದರು, ಗುರುಕುಲ ಶಿಕ್ಷಣ ಸಂಯೋಜಕಿ ವಿಶಾಲ ಶೆಟ್ಟಿ ನಿರೂಪಿಸಿದರು, ಶಿಕ್ಷಕ ರಾಘವೇಂದ್ರ ಅಮ್ಮುಜೆ ವಂದಿಸಿದರು.


Spread the love