ಶಿರ್ವದಲ್ಲಿ ಕ್ರೈಸ್ತ ಉದ್ಯಮಿ ನಿರ್ಮಿಸಿದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಸಚಿವ ಕೋಟ ಭೇಟಿ

Spread the love

ಶಿರ್ವದಲ್ಲಿ ಕ್ರೈಸ್ತ ಉದ್ಯಮಿ ನಿರ್ಮಿಸಿದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಸಚಿವ ಕೋಟ ಭೇಟಿ

ಉಡುಪಿ: ಉಡುಪಿ ಜಿಲ್ಲೆಯ ಶಿರ್ವ-ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್‌ನಲ್ಲಿ ಶ್ರೀಸಿದ್ದಿವಿನಾಯಕನ ಪರಮಭಕ್ತ ಉದ್ಯಮಿ ಗ್ಯಾಬ್ರಿಯಲ್ ಎಫ್. ನಜ್ರತ್‌ರವರು ಸ್ವಂತ ಜಮೀನಿನಲ್ಲಿ ತಮ್ಮ ತಂದೆ ತಾಯಿ‌ ಸವಿನೆನಪಿಗಾಗಿ ಅಂದಾಜು ಒಂದೂವರೆ ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀಸಿದ್ದಿವಿನಾಯಕ ದೇವಾಲಯಕ್ಕೆ‌ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು ‘ಮುಂಬೈ ಮೂಲದ ಕ್ರೈಸ್ತ ಉದ್ಯಮಿಯೊಬ್ಬರು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದೆ. ಉಡುಪಿ ಜಿಲ್ಲೆಯ ಶಿರ್ವ ದಲ್ಲಿರುವ ಈ ದೇವಸ್ಥಾನ ಕಲಾತ್ಮಕವಾಗಿ ಮೂಡಿಬಂದಿದೆ. ದೇವಳ ನಿರ್ಮಿಸಿದ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಅಭಿನಂದನೆಗೆ ಅರ್ಹರು. ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಲು ಇಂತಹ ವ್ಯಕ್ತಿಗಳು ಕಾರಣರಾಗುತ್ತಾರೆ. ಈ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯ ವತಿಯಿಂದ ಯಾವುದೇ ಸಹಕಾರ ಬೇಕಿದ್ದಲ್ಲಿ ನೀಡಲು ಸಿದ್ದ ಎಂದರು.

ಈ ವೇಳೆ ಗ್ಯಾಬ್ರಿಯಲ್‌ ನಜ್ರೆತ್‌, ಸತೀಶ್‌ ಶೆಟ್ಟಿ ಮಲ್ಲಾರ್‌, ಗಿರಿಧರ್‌ ಪ್ರಭು, ಪ್ರಸಾದ್ ಶೆಟ್ಟಿ ಕುತ್ಯಾರು, ರಾಜೇಶ್‌ ನಾಯಕ್‌, ಗ್ರಾಮ ಪಂಚಾಯತ್‌ ಸದಸ್ಯರಾದ ಶ್ರೀನಿವಾಸ ಶೆಣೈ, ಪ್ರವೀಣ್‌ ಸಾಲ್ಯಾನ್‌, ಪ್ರಶಾಂತ್‌ ಪಾಲಮೆ, ರಾಜೇಶ್‌ ಜಯಂತ್‌, ದಿನೇಶ್‌ ಪೂಜಾರಿ, ನಿತಿನ್‌ ನಾಯಕ್‌, ಸೂರಜ್‌ ಹಾಗೂ ಇತರರು ಉಪಸ್ಥಿತರಿದ್ದರು.


Spread the love