ಶಿರ್ವ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಅವರಿಗೆ ನಾಗರಿಕ ಸಮ್ಮಾನ

Spread the love

ಶಿರ್ವ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಅವರಿಗೆ ನಾಗರಿಕ ಸಮ್ಮಾನ

ಶಿರ್ವ: ಶಿರ್ವ ಗ್ರಾ. ಪಂ.ನಲ್ಲಿ 16 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದು, ದಾನಿಗಳ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 1 ಕೋಟಿಗೂ ಅಧಿಕ ಮೊತ್ತದ ಜನಪರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಜಾತಿ,ಮತ ಭೇದಗಳಿಲ್ಲದೆ ರಾಜಕೀಯ ರಹಿತ ಪ್ರಾಮಾಣಿಕ ಸೇವೆ ನೀಡಿ ತನ್ನ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರೈಸಿದ ಜನಸ್ನೇಹಿ ನಾಯಕ ಕೆ.ರಾಮರಾಯ ಪಾಟ್ಕರ್‌ ಅವರಿಗೆ ಬಂಟಕಲ್ಲು ಪರಿಸರದ ಸಂಘಟನೆಗಳ ಅಭಿನಂದನೆ ಕಾರ್ಯಕ್ರಮವು ಆ.27 ರಂದು ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ನಡೆಯಿತು.

ಮುಖ್ಯ ಅತಿಥಿ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಕೆ.ಜಿ ಮಂಜುನಾಥ್‌ ನಾಗರಿಕರ ಪರವಾಗಿ ಕೆ.ಆರ್‌. ಪಾಟ್ಕರ್‌ ಮತ್ತು ಸಂಗೀತಾ ಪಾಟ್ಕರ್‌ ದಂಪತಿಯ ಸಮ್ಮಾನ ನೆರವೇರಿಸಿ ಮಾತನಾಡಿ ಶಿರ್ವ ಗ್ರಾ.ಪಂ. ಅಧ್ಯಕ್ಷನಾಗಿ ಪಾಟ್ಕರ್‌ ಅವರು ಕರ್ತವ್ಯವನ್ನು ಗ್ರಹಿಸಿದ ರೀತಿ ಉತ್ತಮವಾಗಿದ್ದು ಹುದ್ದೆಯ ಮೌಲ್ಯವನ್ನು ಎತ್ತಿ ತೋರಿಸಿದ್ದಾರೆ. ಜನರ ನಿರೀಕ್ಷೆಯನ್ನು ಹುಸಿಮಾಡದೆ ಆಧುನಿಕತೆಗೆ ಒಗ್ಗಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿ ಮಾದರಿಯಾದ ಪಾಟ್ಕರ್‌ ಅವರ ಕೆಲಸವನ್ನು ನಾಗರಿಕ ಸಮಾಜ ಗುರುತಿಸಿದೆ ಎಂದರು.

ಶಿರ್ವ ಗ್ರಾ.ಪಂ. ಸದಸ್ಯೆ ವೈಲೆಟ್‌ ಕ್ಯಾಸ್ತಲಿನೋ ಅಭಿನಂದನಾ ಪತ್ರ ವಾಚಿಸಿದರು. ಸಮ್ಮಾನಕ್ಕೆ ಉತ್ತರಿಸಿದ ಕೆ.ಆರ್‌. ಪಾಟ್ಕರ್‌ ಗ್ರಾಮದ ಅಭಿವೃದ್ಧಿಗೆ ಕಾರಣೀಭೂತರಾದ ದಾನಿಗಳನ್ನು ಅಭಿನಂದಿಸಿ, ನಾಗರಿಕ ಸಮ್ಮಾನವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಇಗ್ನೇಶಿಯಸ್‌ ಡಿಸೋಜಾ ಮಾತನಾಡಿದರು. ಸಮಿತಿಯ ಅಧ್ಯಕ್ಷ ಮಾಧವ ಕಾಮತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಪರಿಸರದ ಸಂಘಟನೆಗಳ ಅಧ್ಯಕ್ಷರಾದ ವಿಲ್ಫ್ರೈಡ್‌ ಪಿಂಟೋ,ರೀನಾ ಡಿಸೋಜಾ,ಶಂಕರ ಪದಕಣ್ಣಾಯ,ಸುಜಿತ್‌ ಕುಮಾರ್‌, ಅನಂತರಾಮ ವಾಗ್ಲೆ, ಗೀತಾ ವಾಗ್ಲೆ, ಮಂಜುನಾಥ ಪೂಜಾರಿ,ಉಮೇಶ್‌ ರಾವ್‌,ಮುರಳೀಧರ ಆಚಾರ್ಯ ಮತ್ತು ಡೇವಿಡ್‌ ಡಿಸೋಜಾ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು,ವಿವಿಧ ಸಂಘಟನೆಗಳ ಸದಸ್ಯರು,ಪದಾಧಿಕಾರಿಗಳು,ಪಾಟ್ಕರ್‌ ಅಭಿಮಾನಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಬಂಟಕಲ್ಲು ನಾಗರಿಕ ಸಮಿತಿಯ ಉಪಾಧ್ಯಕ್ಷ ಪುಂಡಲೀಕ ಮರಾಠೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಅರುಂದತಿ ಮತ್ತು ವಸಂತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪಾಟ್ಕರ್‌ ಅಭಿನಂದನಾ ಸಮಿತಿಯ ಕಾರ್ಯದರ್ಶಿ ದಿನೇಶ್‌ ದೇವಾಡಿಗ ವಂದಿಸಿದರು.

ಕೋಡುಗುಡ್ಡೆಯಿಂದ ಕೆ.ಆರ್‌.ಪಾಟ್ಕರ್‌ ಅವರನ್ನು ವಿವಿಧ ಬಿರುದಾವಲಿಯೊಂದಿಗೆ ಮೆರವಣಿಗೆಯ ಮೂಲಕ ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ವೇದಿಕೆಗೆ ಕರೆತರಲಾಯಿತು. ಕಲಾವಿದ ಪ್ರಕಾಶ್‌ ಸುವರ್ಣ ಕಟಪಾಡಿ ಬಳಗದವರಿಂದ ಸಂಗೀತ ರಸಮಂಜರಿ, ಕುಂದಾಪುರದ ಮೂರು ಮುತ್ತು ಬಳಗದವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.


Spread the love