ಶಿರ್ವ| ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಮಹಿಳೆಗೆ 4.10 ಲಕ್ಷ ರೂ. ವಂಚನೆ
ಉಡುಪಿ: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಹಿಳೆಯೊಬ್ಬರಿಗೆ 4.10 ಲಕ್ಷ ರೂ. ಆನ್ಲೈನ್ ಮೂಲಕ ವಂಚಿಸಿರುವ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಲಿನೆಟ್ ಮೆಂಡೋನ್ಸ (52) ಅವರಿಗೆ ಸೆಪ್ಟೆಂಬರ್ 18 ರಂದು ವಾಟ್ಸಾಪ್ನಲ್ಲಿ ವಿಡಿಯೋ ಕಾಲ್ ಬಂದಿದ್ದು, ಪೊಲೀಸ್ ಸಮವಸ್ತ್ರ ಧರಿಸಿದ ಅಪರಿಚಿತ ವ್ಯಕ್ತಿ ಮಾತನಾಡಿ, “ನಿಮ್ಮ ಮೇಲೆ ಕೇಸು ಇದೆ, ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಮಾಡಲಾಗುತ್ತದೆ. ಬ್ಯಾಂಕ್ ಖಾತೆಯಲ್ಲಿರುವ ಹಣ ಉಳಿಸಿಕೊಳ್ಳಬೇಕಾದರೆ ತಕ್ಷಣವೇ ನಾನು ಕಳುಹಿಸಿದ ಖಾತೆಗೆ ಹಣ ಹಾಕಬೇಕು,” ಎಂದು ಪಿಡಿಎಫ್ ಫೈಲ್ ಕಳುಹಿಸಿದ್ದಾನೆ.
ಈ ಬೆದರಿಕೆಯಿಂದ ಭಯಭೀತಗೊಂಡ ಲಿನೆಟ್, ಆತ ನಿಜವಾದ ಪೊಲೀಸ್ ಅಧಿಕಾರಿ ಎಂದು ನಂಬಿ, ತನ್ನ ಖಾತೆಯಲ್ಲಿದ್ದ ಒಟ್ಟು ₹4,10,000ರನ್ನು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿದರು.
ನಂತರ ಮಹಿಳೆಗೆ ವಂಚನೆ ನಡೆದಿರುವುದು ತಿಳಿದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.