ಶಿವಮೊಗ್ಗ: ಚಿಂದಿ ಆಯ್ದು ಮೊಮ್ಮಗನ ಓದಿಸುತ್ತಿರುವ ಅಜ್ಜಿ

Spread the love

 ಶಿವಮೊಗ್ಗ: ಚಿಂದಿ ಆಯ್ದು ಮೊಮ್ಮಗನ ಓದಿಸುತ್ತಿರುವ ಅಜ್ಜಿ

  • 2015ರಲ್ಲಿ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಕುಟುಂಬದ ಸಂಕಷ್ಟದ ಕಥೆ 

 ಶಿವಮೊಗ್ಗ: ನಗರದಲ್ಲಿ ಈಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇನ್ನೊಂದೆಡೆ ಏಳು ವರ್ಷಗಳ ಹಿಂದೆ ಕೋಮು ದ್ವೇಷಕ್ಕೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಆಲ್ಕೊಳದ ವಿಶ್ವನಾಥ ಶೆಟ್ಟಿ ಅವರ ತಾಯಿ ಮೀನಾಕ್ಷಿ ಅವರು ಚಿಂದಿ ಆಯ್ದು ಬಂದ ಹಣದಲ್ಲಿ ಮೊಮ್ಮಗನನ್ನು ಓದಿಸಲು ಹೆಣಗಾಡುತ್ತಿದ್ದಾರೆ.

ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಪಿಎಫ್‌ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ವಿಶ್ವನಾಥ ಶೆಟ್ಟಿ ಅವರನ್ನು ಹತ್ಯೆ ಮಾಡಿದ್ದರು. ಆಗ ರಾಜ್ಯ ಸರ್ಕಾರ ₹ 5 ಲಕ್ಷ ಪರಿಹಾರ ನೀಡಿತ್ತು. ಆ ಹಣವೂ ಕಾಯಿಲೆಯಿಂದ ನರಳುತ್ತಿದ್ದ ಅವರ ಪತ್ನಿಯ ಚಿಕಿತ್ಸೆಗೆ ಖರ್ಚಾಗಿತ್ತು. ಕೊನೆಗೆ ಅವರೂ ಮೃತಪಟ್ಟರು.

ಅವರ ತಾಯಿ ಮೀನಾಕ್ಷಿ ಇಂದಿಗೂ ಚಿಂದಿ ಆಯ್ದು ಬಂದ ಹಣದಲ್ಲಿ ಬದುಕಿನ ಬಂಡಿ ಸಾಗಿಸಲು ನಿತ್ಯ ಹೋರಾಡುತ್ತಿದ್ದಾರೆ.

ಹರ್ಷ ಹತ್ಯೆಯಾದ ಬಳಿಕ ರಾಜ್ಯದ ವಿವಿಧೆಡೆಯಿಂದ ಅವರ ಮನೆಗೆ ಬರುತ್ತಿರುವ ನಾಯಕರು ಹಣಕಾಸಿನ ನೆರವು ನೀಡುತ್ತಿದ್ದಾರೆ. ನೆರವಿನ ಪ್ರಮಾಣ ₹ 1 ಕೋಟಿ ದಾಟಿದೆ. ಆದರೆ, ವಿಶ್ವನಾಥ್ ಅವರ ತಾಯಿ ಮಾತ್ರ ಪುಟ್ಟ ಮನೆಯಲ್ಲಿ ‘ಕತ್ತಲೆ’ಯಲ್ಲೇ ಬದುಕು ಸಾಗಿಸುತ್ತಿದ್ದಾರೆ.

ವಿಶ್ವನಾಥ್‌ ಅವರ ತಾಯಿ ಇದ್ದ ಒಬ್ಬ ಮೊಮ್ಮಗನನ್ನು ಕೊಪ್ಪದ ವಸತಿ ಶಾಲೆಯಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ನಗರದಲ್ಲಿ ನಿತ್ಯವೂ ಚಿಂದಿ ಆಯ್ದು ಬಂದ ಹಣವನ್ನು ಮೊಮ್ಮಗನಿಗೆ ಕಳುಹಿಸುತ್ತಿದ್ದಾರೆ.

ದುಡಿದು ಕುಟುಂಬ ಮುನ್ನಡೆಸಬೇಕಾಗಿದ್ದ ಮಗನನ್ನು ಕಳೆದುಕೊಂಡ ಬಳಿಕ ತಾಯಿ ಮೀನಾಕ್ಷಿ ಅವರ ಹೆಗಲಿಗೇ ಸಂಸಾರ ಸರಿದೂಗಿಸಿಕೊಂಡು ಹೋಗುವ ಭಾರ ಬಿದ್ದಿತ್ತು. ಮಗನನ್ನು ಕಳೆದುಕೊಂಡ ಬಳಿಕ ಹೇಳಿಕೊಳ್ಳುವಂತಹ ನೆರವಿನ ಹಸ್ತವನ್ನು ಯಾರೂ ಚಾಚದೇ ಇರುವುದರಿಂದ ಚಿಂದಿ ಆಯ್ದು ಬದುಕು ಸಾಗಿಸುವುದು ಇವರಿಗೆ ಅನಿವಾರ್ಯವಾಗಿತ್ತು.

ವಿದ್ಯುತ್‌ ಸಂಪರ್ಕ ಕಡಿತ: ವಿದ್ಯುತ್‌ ಬಿಲ್‌ ಕಟ್ಟದ ಕಾರಣ ಮೂರು ವರ್ಷಗಳಿಂದ ಮನೆಯ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತ್ತು. ನಲ್ಲಿ ನೀರು ಕೂಡ ಬಂದ್‌ ಆಗಿತ್ತು. ಮನೆ ಸುಣ್ಣ- ಬಣ್ಣ ಕಾಣದೇ ಬೀಳುವ ಸ್ಥಿತಿಗೆ ಬಂದಿತ್ತು. ಈ ವಿಷಯ ತಿಳಿದ ಜೆಡಿಎಸ್‌ ಮುಖಂಡ ಎಂ. ಶ್ರೀಕಾಂತ್ ಅವರು ಶನಿವಾರ ಇವರ ಮನೆಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದರು. ವಿದ್ಯುತ್ ಶುಲ್ಕ, ನಲ್ಲಿ ಕಂದಾಯವನ್ನು ಭರಿಸಿದರು. ಮನೆಗೆ ಸುಣ್ಣ- ಬಣ್ಣ ಬಳಿಸಲು ಹಣಕಾಸಿನ ನೆರವು ನೀಡಿದರು.


Spread the love