ಶಿವರಾತ್ರಿಗೆ ಮಲೆಮಹದೇಶ್ವರಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

Spread the love

ಶಿವರಾತ್ರಿಗೆ ಮಲೆಮಹದೇಶ್ವರಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಚಾಮರಾಜನಗರ: ಮಹಾ ಶಿವರಾತ್ರಿ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ನಡೆಯುತ್ತಿದ್ದು, ಶುಕ್ರವಾರದಿಂದ ಆರಂಭವಾಗಿರುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿ ವಿವಿಧ ಸೇವೆ, ಪೂಜೆಗಳನ್ನು ನೆರವೇರಿಸಿ ಮಾದಪ್ಪನ ದರ್ಶನ ಪಡೆದು ಪುನೀತರಾದರು.

ಶಿವರಾತ್ರಿ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಜನರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರೆ, ಇನ್ನು ರಾತ್ರಿಪೂರ್ತಿ ಭಕ್ತರು ಜಾಗರಣೆ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು. ಬೆಟ್ಟದಲ್ಲಿ ಐದು ದಿನಗಳ‌ ಮಹಾಶಿವರಾತ್ರಿ ಜಾತ್ರೆಗೆ ಶುಕ್ರವಾರವೇ ಚಾಲನೆ ನೀಡಲಾಗಿದ್ದು, ಎರಡನೇ ಹಾಗೂ ಶಿವರಾತ್ರಿ ದಿನವಾದ ಶನಿವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿವಿಧ ಅಭಿಷೇಕಗಳು, ವಿಶೇಷ ಪೂಜೆಗಳು ನೆರವೇರಿದವು. ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ ಹರಕೆ ತೀರಿಸಿದರು. ಮೂರು ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷದಷ್ಟು ಜನರು ದೇವಾಲಯಕ್ಕೆ ಭೇಟಿ ನೀಡಿರುವುದು ವಿಶೇಷವಾಗಿದೆ.

ಜಿಲ್ಲೆ, ಹೊರ ಜಿಲ್ಲೆ ಹಾಗೂ ನೆರೆಯ ತಮಿಳುನಾಡಿನಿಂದ ಬಂದಿರುವ ಭಕ್ತರು ಹುಲಿ ವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಸೇವೆಗಳನ್ನು ನೆರವೇರಿಸಿದರು. ದೇವಾಲಯದ ಹೊರ ಆವರಣದಲ್ಲಿ ಉರುಳು ಸೇವೆ ಮಾಡಿ, ಈಡುಕಾಯಿ ಒಡೆದು, ಧೂಪ ಹಚ್ಚಿ ಹರಕೆ ತೀರಿಸಿದರು.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳಿಂದ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ 1.5 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಇವತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಭಕ್ತರಿಗೆ ಮೂಲಸೌಕರ್ಯ ಗಳನ್ನು‌ ಕಲ್ಪಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮಿನಿ ಸಾಹು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಇತರರು ಇದ್ದರು


Spread the love