ಶೀಘ್ರದಲ್ಲೇ ಸೈಬರ್ ಪಾಲಿಸಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

Spread the love

ಶೀಘ್ರದಲ್ಲೇ ಸೈಬರ್ ಪಾಲಿಸಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ರಾಜ್ಯದ ಬ್ಯಾಂಕಿಂಗ್ ವ್ಯವಸ್ಥೆ, ಎಲ್ಲಾ ಇಲಾಖೆಗಳಲ್ಲಿ ಸೈಬರ್ ಸೆಕ್ಯೂರಿಟಿ ಹೊಂದುವುದು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಶೀಘ್ರವೇ ಹೊಸದಾಗಿ ಸೈಬರ್ ಪಾಲಿಸಿಯೊಂದನ್ನು ಜಾರಿಗೆ ತರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಾಗತಿಕ ಸ್ಪರ್ಧಾತ್ಮಕತೆ ಮತ್ತು ಜಾಗತಿಕ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಮೈಸೂರಿನ ಇಲವಾಲದ ಮೈರಾ ಸ್ಕೂಲ್ ಆಫ್ ಬಿಸಿನೆಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೈಬರ್ ವರ್ಸ್ ಲ್ಯಾಬ್ ಉದ್ಘಾಟನೆ, ಕಾಪ್ ಕನೆಕ್ಟ್ ಅಪ್ಲಿಕೇಶನ್ ಮತ್ತು ಸೈಬರ್ ಸ್ವಾಸ್ಥ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರ ಸೈಬರ್ ಸೆಕ್ಯೂರಿಟಿಗೆ ಹೆಚ್ಚು ಒತ್ತು ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿತ್ಯವೂ ಸಂಭವಿಸುತ್ತಿರುವ ಸೈಬರ್ ಅಪರಾಧವನ್ನು ಗಮನಿಸಿದರೆ ಇದರ ಅನಿವಾರ್ಯತೆ ತಿಳಿಯುತ್ತದೆ. ಮಾತ್ರವಲ್ಲದೇ ಪ್ರತಿಯೊಂದು ಇಲಾಖೆಯೂ ಮಾಹಿತಿ ಗೌಪ್ಯತೆ, ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೈಬರ್ ಸೆಕ್ಯೂರಿಟಿ ಹೊಂದಬೇಕಿದೆ. ಅದಕ್ಕಾಗಿ ಹೊಸದಾಗಿ ಸೈಬರ್ ಪಾಲಿಸಿಯೊಂದನ್ನು ಜಾರಿಗೆ ತರಲು ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಸೆಮಿಕಂಡಕ್ಟರ್ ತಯಾರಿಕೆ, ಏರೋ ಸ್ಪೇಸ್, ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಕಾಯಿದೆಗಳನ್ನು ರೂಪಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು ಅತ್ಯಂತ ತುರ್ತಾಗಿ ಉತ್ತಮವಾದ ಸೈಬರ್ ಪಾಲಿಸಿಯನ್ನು ಹೊರತರುತ್ತೇವೆ. ಇದಕ್ಕೆ ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರಂಭಿಸಿರುವ ಸೈಬರ್ ಸೆಕ್ಯೂರಿಟಿ ಸೊಸೈಟಿ ಸಹಕಾರವನ್ನೂ ಪಡೆಯಲಾಗುವುದು.

ರಾಜ್ಯ ಸರಕಾರ 2025ರ ವೇಳೆಗೆ ಕರ್ನಾಟಕದ ಸೂಪರ್-30 ಕಾರ್ಯಕ್ರಮದ ಭಾಗವಾಗಿ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸೈಬರ್ ಲ್ಯಾಬ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಉದ್ಯೋಗಿಗಳ ಸಂಪರ್ಕವನ್ನು ಒಳಗೊಂಡ ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದರು.

ಕರ್ನಾಟಕ ಪೊಲೀಸ್ ಸೈಬರ್ ಅಪರಾಧವನ್ನು ತಡೆಗಟ್ಟುವ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಲ್ಲದೇ ನಮ್ಮ ಪೊಲೀಸ್ ವ್ಯವಸ್ಥೆ ಬ್ಯಾಂಕಿಂಗ್ ವ್ಯವಸ್ಥೆ ಹ್ಯಾಕಿಂಗ್‌ಗೆ ಒಳಗಾಗದಂತೆ ಎಚ್ಚರಿಕೆ ವಹಿಸುವ ಹಾಗೂ ಆ ರೀತಿಯ ಪ್ರಕರಣಗಳಾದಾಗ ಅದನ್ನು ಸಮರ್ಥವಾಗಿ ಎದುರಿಸುವ ಚಾಕಚಕತ್ಯತೆ ಹೊಂದಿದೆ. ಸೆಕ್ಯೂರಿಟಿ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ 72 ವರ್ಷ ಹಳೆಯದಾದ ಗೇಟ್‌ಗಳು ಸೋರುವುದನ್ನು ನಾನು ಗಮನಿಸಿ ಕೂಡಲೇ ಜಲಾಶಯದ 16ಗೇಟ್‌ಗಳ ದುರಸ್ತಿಗೆ ಸೂಚನೆ ನೀಡಲಾಯಿತು. ರಾಜರು ನೀಡಿದ ಕೊಡುಗೆಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರು ನಿರ್ಮಿಸಿದ 94ಸಾವಿರ ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ 14 ಸಣ್ಣ ಅಣೆಕಟ್ಟುಗಳು ದುರಸ್ತಿಯಲ್ಲಿದ್ದವು. ಕೆಲವು ನೆಲಸಮವಾಗಿದ್ದವು. ಅವುಗಳಲ್ಲಿ 11ನ್ನು ದುರಸ್ತಿಗೊಳಿಸಲಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಸೈಬರ್ ವರ್ಸ್ ಫೌಂಡೇಷನ್ ಸಲಹಾ ಮಂಡಳಿ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸೈಬರ್ ವರ್ಸ್ ಫೌಂಡೇಷನ್ ಅಧ್ಯಕ್ಷೆ ತ್ರಿಷಿಕಾ ಕುಮಾರಿ ಒಡೆಯರ್ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here