ಶೀರೂರು ಶ್ರೀಪಾದರಿಂದ ತೆರಿಗೆ ವಂಚನೆಯಾಗಿಲ್ಲ – ಭಕ್ತ ಸಮಿತಿ

Spread the love

ಶೀರೂರು ಶ್ರೀಪಾದರಿಂದ ತೆರಿಗೆ ವಂಚನೆಯಾಗಿಲ್ಲ – ಭಕ್ತ ಸಮಿತಿ

ಉಡುಪಿ: ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮಿವರ ತೀರ್ಥ ಶ್ರೀಪಾದರು ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಇಟ್ಟಿದ್ದಾರೆ ಎಂದು ಸೋದೆ ಮತ್ತು ಪಲಿಮಾರು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಷಯ ಎಂದು ಶಿರೂರು ಮಠದ ಭಕ್ತ ಸಮಿತಿ ಹೇಳಿದೆ

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಭಕ್ತ ಸಮಿತಿ ಶ್ರೀ ಶೀರೂರು ಮಠದಲ್ಲಿ ಸೋದೆ ಹಾಗೂ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಶ್ರೀ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಶ್ರೀಪಾದರು ಕೋಟ್ಯಾಂತರ ರೂಪಾಯಿ ಆದಾಯ ತೆರಿಗೆ ಬಾಕಿ ಇಟ್ಟಿರುತ್ತಾರೆ ಎಂದು ಅವರುಗಳು ತಿಳಿಸಿರುತ್ತಾರೆಂದು ವರದಿಯಾಗಿರುತ್ತದೆ.

ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಡಳಿತ ಅವಧಿಯಲ್ಲಿ 2017-18 ರ ವರೆಗೆ ಎಲ್ಲಾ ತೆರಿಗೆ ಪಾವತಿಯ ವಿವರ ಮತ್ತು ಪ್ರತಿಗಳು ಲಭ್ಯವಿದೆ. ಪತ್ರಿಕಾ ವರದಿಯಲ್ಲಿ ಮಾಡಿರುವ ಆರೋಪವು ಸಮಂಜಸವಲ್ಲ.

ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿ ಅದನ್ನು ಒಪ್ಪದಿದ್ದರೇ ಅದರ ನಿಖರತೆಯನ್ನು ಪ್ರಶ್ನಿಸುವುದು ಎಲ್ಲಾ ಸಂಸ್ಥೆಗಳಲ್ಲಿ ಸಹಜ ಪ್ರಕ್ರಿಯೆ ಆಗಿರುತ್ತದೆ.

ಆದಾಯ ತೆರಿಗೆ ಇಲಾಖೆಯವರು ನೋಟೀಸ್ ಜಾರಿ ಮಾಡಿದ ಕೂಡಲೇ ಮಠದ ಆದಾಯಗಳನ್ನು ಮಾಧ್ಯಮದಲ್ಲಿ ಬಹಿರಂಗಗೊಳಿಸುವುದು ದುರುದ್ದೇಶ ಪೂರಿತವಾಗಿದ್ದು, ಅಸಮಂಜಸವೂ ಹಾಗೂ ಕಾನೂನಿಗೆ ವಿರುದ್ಧವೂ ಆಗಿರುತ್ತದೆ.

ಈ ಮೂಲಕ ಶ್ರೀ ಶೀರೂರು ಮಠದ ಅನುಯಾಯಿಗಳಿಗೆ, ಅಸಂಖ್ಯ ಭಕ್ತರಿಗೆ ಹಾಗೂ ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ನೋವನ್ನುಂಟು ಮಾಡಿರುತ್ತಾರೆ. ಈ ಕುರಿತು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿರುವುದಾಗಿ ಶ್ರೀ ಶೀರೂರು ಮಠದ ಭಕ್ತ ಸಮಿತಿ, ಪ್ರಕಟಣೆಯಲ್ಲಿ ತಿಳಿಸಿದೆ.


Spread the love