ಶುಕ್ರವಾರ (ನಾಳೆ) ಕೋಟೇಶ್ವರದಲ್ಲಿ ಕೊಡಿ ಹಬ್ಬದ ಸಂಭ್ರಮ 

Spread the love

ಶುಕ್ರವಾರ (ನಾಳೆ) ಕೋಟೇಶ್ವರದಲ್ಲಿ ಕೊಡಿ ಹಬ್ಬದ ಸಂಭ್ರಮ 

ಕುಂದಾಪುರ: ವೃಶ್ಚಿಕ ಮಾಸದ ನ.19 ರ ಶುಕ್ರವಾರದಂದು ನಡೆಯುವ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ (ಕೊಡಿ ಹಬ್ಬ) ಇಂದು ನಡೆಯಲಿದೆ. ಕೋವಿಡ್ ಹಿನ್ನೆಲೆ ಕಳೆದ ಬಾರಿ ಸರಳವಾಗಿ ಆಚರಿಸಲಾಗಿದ್ದ ಕೊಡಿ ಹಬ್ಬ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯ ಸಂಭ್ರಮಕ್ಕಾಗಿ ದೇಶ-ವಿದೇಶದಿಂದ ಜನರು ಊರಿಗೆ ಆಗಮಿಸಿದ್ದು, ಜನಜಾತ್ರೆಯಾಗುವ ನಿರೀಕ್ಷೆ ಇದೆ.

ಪುರಾಣ ಪುಟಗಳಲ್ಲಿ ಧ್ವಜಪುರವೆಂದು ಪ್ರಸಿದ್ದಿಯಾದ ಕೋಟೇಶ್ವರದ ‘ಕೊಡಿ ಹಬ್ಬ’ ದಲ್ಲಿ ಕೋಟಿಲಿಂಗೇಶ್ವರನನ್ನು ಕುಳ್ಳಿರಿಸುವ ಬ್ರಹ್ಮರಥಕ್ಕೆ ಶತಮಾನಗಳ ಇತಿಹಾಸವಿದೆ. ರಾಜ್ಯದಲ್ಲಿರುವ ಬ್ರಹ್ಮ ರಥಗಳ ಪೈಕಿ ದೊಡ್ಡದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ನಡೆದ ಬಳಿಕ, 7 ದಿನಗಳ ಕಾಲ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ ಕಟ್ಟ ಕಟ್ಟಳೆ ‘ ಕಟ್ಟೆ ಸೇವೆ ‘ ಗಾಗಿ ಸುತ್ತ-ಮುತ್ತಲಿನ ಗ್ರಾಮಗಳ ಮನೆ ಬಾಗಿಲಿಗೆ ಬರುವ ಶ್ರೀ ದೇವರನ್ನು ಅತ್ಯಂತ ಶೃದ್ದೆಯಿಂದ ಬರಮಾಡಿಕೊಂಡು ಪೂಜೆಯನ್ನು ಸಲ್ಲಿಸುವುದು ಕೋಟೇಶ್ವರ ಹಾಗೂ ಕುಂದಾಪುರ ಪರಿಸರದಲ್ಲಿ ವಾಡಿಕೆಯಾಗಿದೆ. ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಗಳು ನಡೆದ ಬಳಿಕ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ, ಹೆಚ್ಚಿನ ಪಾರಂಪರಿಕ ಕಟ್ಟೆಗಳು ತೆರವಾಗಿರುವುದರಿಂದಾಗಿ, ತಾತ್ಕಾಲಿಕವಾಗಿ ನಿರ್ಮಿಸಲಾದ ಕಟ್ಟೆಗಳಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸುವ ಸಂಪ್ರದಾಯ ಪ್ರಾರಂಭವಾಗಿದೆ.

ಕೊಡಿ ಹಬ್ಬ:
ಕರಾವಳಿ ಜಿಲ್ಲೆಯ ಜನರ ಆಡು ಭಾಷೆಯಲ್ಲಿ ಜನಜನಿತವಾಗಿರುವ ‘ ಕೊಡಿ ಹಬ್ಬ ’ ಎನ್ನುವ ಹೆಸರು ಹುಟ್ಟಿಕೊಳ್ಳಲು ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಕೋಟೇಶ್ವರದ ಆಳ್ವಿಕೆ ನಡೆಸುತ್ತಿದ್ದ ಮಾಹಿಷ್ಮತಿ ರಾಜನಾದ ವಸು ಮಹಾರಾಜ, ಕೋಟಿಲಿಂಗೇಶ್ವರನಿಗೆ ಬ್ರಹ್ಮ ರಥ ಅರ್ಪಣೆ ಮಾಡಲು ನಿಶ್ಚಯಿಸಿದ್ದ. ಜಾತ್ರೆಯ ದಿನವಾದರೂ ರಥ ನಿರ್ಮಾಣ ಸಾಧ್ಯವಾಗದೆ ಇದ್ದುದರಿಂದಾಗಿ, ಕೊಡಿ (ಬಿದಿರು) ಯಿಂದ ನಿರ್ಮಿಸಿದ ರಥದಲ್ಲಿ ಮೊದಲ ಉತ್ಸವ ನಡೆಯಿತು ಎನ್ನುವುದಕ್ಕಾಗಿ ’ ಕೊಡಿ ಹಬ್ಬ’ ಎಂದಾಯಿತು ಎನ್ನುವ ವ್ಯಾಖ್ಯಾನ ಇದೆ. ಪ್ರತಿ ವರ್ಷವೂ ಜಾತ್ರೆಗೆ ಆಗಮಿಸುವ ನವ ದಂಪತಿಗಳು ದೇವರ ದರ್ಶನ ಮಾಡಿ ಕೊಡಿ (ಕಬ್ಬಿನ ಜಲ್ಲೆ) ಯನ್ನು ತೆಗೆದುಕೊಂಡು ಹೋದರೆ, ಸಂತಾನದ ಕೊಡಿ ಅರಳುತ್ತದೆ ಎನ್ನುವ ನಂಬಿಕೆಗಳು ಈ ಜಾತ್ರೆಯಲ್ಲಿ ಇದೆ.

ಸುತ್ತಕ್ಕಿ ಸೇವೆಜಾತ್ರೆಯ ದಿನದಂದು ಸೂರ್ಯ ಉದಯಿಸುವ ಪೂರ್ವದಲ್ಲಿಯೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಅಂದಾಜು 4.5 ಎಕ್ರೆ ವಿಸ್ತಿರ್ಣದ ದೇಗುಲದ ಪುಷ್ಕರಣಿ ‘ ಕೋಟಿ ತೀರ್ಥ’ ದಲ್ಲಿ ಸ್ನಾನ ಮುಗಿಸಿ, ಪುಷ್ಕರಣಿಯ ಸುತ್ತ ಬಿಳಿ ಬಟ್ಟೆಯನ್ನು ಹಾಸಿರುವ ಅಪೇಕ್ಷಿತರಿಗೆ, ಮುಷ್ಠಿ ಅಕ್ಕಿಯನ್ನು ಹಾಕಿ ಹರಕೆಯನ್ನು ತೀರಿಸುತ್ತಾರೆ. ಇದನ್ನು ‘ ಸುತ್ತಕ್ಕಿ ಸೇವೆ’ ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ ಅಪೇಕ್ಷಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದಾಗಿ ಸಹಜವಾಗಿ ‘ ಸುತ್ತಕ್ಕಿ ಸೇವೆ’ ಕಡಿಮೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ಕ್ತರು ಸರೋವರಕ್ಕೆ ಎಸೆಯುವ ಅಕ್ಕಿಗಳು ಅಲ್ಲಿನ ಮೀನುಗಳ ಜೀವಕ್ಕೆ ಸಂಚಕಾರ ತರುತ್ತಿರುವ ಘಟನೆಗಳು ನಡೆದಿದೆ.

ಜಾತ್ರೆಗಿಂತ ಒಂದು ವಾರದ ಮೊದಲೇ ಹಂಗಳೂರಿನಿಂದ-ತೆಕ್ಕಟ್ಟೆ-ಕಾಳಾವರದ ವರೆಗಿನ ಪರಿಸರದ ಊರುಗಳಲ್ಲಿ ಜಾತ್ರೆಯ ಪೂರ್ವ ಸಿದ್ಧತೆಗಳು ಗೋಚರಿಸುತ್ತದೆ. ಜಾತಿ-–ಮತವನ್ನು ಮೀರಿದ ಕೊಡಿ ಹಬ್ಬದಲ್ಲಿ ಎಲ್ಲ ಧರ್ಮದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕಟ್ಟಡ ಹಾಗೂ ಪೇಟೆಯನ್ನು ದೀಪಾಲಂಕಾರಗಳಿಂದ ಸಿಂಗರಿಸುವ ಮೂಲಕವಾಗಿ ಹಬ್ಬಕ್ಕೆ ಮೆರಗು ನೀಡುತ್ತಾರೆ. ಜಾತ್ರೆಯ ಮಾರನೇಯ ( ನ.20 ) ದಿನ ಮಧ್ಯರಾತ್ರಿಯಿಂದ ನಸುಕಿನ ತನಕ ನಡೆಯುವ ಪಾರಂಪರಿಕ ಓಕುಳಿಯಾಟವನ್ನು ನೋಡಲು ಕೊರೆಯುವ ಚಳಿಯ ನಡುವೆಯೂ ದೊಡ್ಡ ಸಂಖ್ಯೆಯ ಜನರು ಕಾದಿರುತ್ತಾರೆ.

ಪಾರ್ಕಿಂಗ್ ವ್ಯವಸ್ಥೆ
ಜಾತ್ರೆಯ 3-4 ದಿನಗಳ ಕಾಲ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಜನರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದೇ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಈ ಬಾರಿ ಪಾರ್ಕಿಂಗ್ ಸಮಸ್ಯೆ ತಲೆದೋರಬಾರದು ಎನ್ನುವ ಕಾರಣಕ್ಕಾಗಿ ಕುಂದಾಪುರ, ತೆಕ್ಕಟ್ಟೆ, ಕಾಳಾವರ ಮುಂತಾದ ಭಾಗಗಳಿಂದ ಬರುವ ವಾಹನ ಸವಾರರು ಎಲ್ಲೆಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು ಎನ್ನುವ ಕುರಿತು ಸ್ವಷ್ಟ ಮಾಹಿತಿಗಳನ್ನು ನೀಡಿರುವ ಪೊಲೀಸ್ ಇಲಾಖೆ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಿದೆ.


Spread the love