ಶೇ.100ರಷ್ಟು ಮತದಾನ ಆಗಬೇಕು: ಜಿ.ಸಿ.ಪ್ರಕಾಶ್

Spread the love

ಶೇ.100ರಷ್ಟು ಮತದಾನ ಆಗಬೇಕುಜಿ.ಸಿ.ಪ್ರಕಾಶ್

ಮೈಸೂರು: ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರಗಳಿಗೆ ಹೋಲಿಸಿದರೆ ನಗರ ಭಾಗಗಳಲ್ಲಿ ಮತದಾನ ಮಾಡುವವರು ಹಿಂದೆ ಇದ್ದಾರೆ. ಹೀಗಾಗಿ ಶೇ.100ರಷ್ಟು ಮತದಾನ ಆಗಬೇಕಾಗಿದ್ದು, ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಪ್ರಕಾಶ್ ತಿಳಿಸಿದರು.

ನಗರದ ಆಡಳಿತ ತರಬೇತಿ ಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣೆಯ ಮತದಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ, ಮೈಸೂರು ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಪಂಚಾಯಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೊದಲು ಮತದಾನ ಮಾಡಲು ಜನ ಭಯಪಡುತ್ತಿದ್ದರು. ಆದರೆ ಇಂದು ಚುನಾವಣಾ ಆಯೋಗ ಅಂತಹ ಭಯದ ವಾತಾವರಣವನ್ನು ದೂರ ಮಾಡಿದೆ. ದಿನದಿಂದ ದಿನಕ್ಕೆ ಹೊಸ ಮತದಾರರು ಹುಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಮತದಾನದ ಬಗ್ಗೆ ಹಾಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಮತದಾರರ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಹಲವಾರು ಆಸೆ ಆಮೀಷಗಳಿಗೆ ಮತದಾರರು ಬಲಿಯಾಗುವ ಸಾಧ್ಯತೆಗಳಿರುತ್ತದೆ. ಇಂತಹ ಕಾರಣಕ್ಕೆ ಮತದಾರರನ್ನು ಸಂಪರ್ಕಿಸಿ ಅವರಿಗೆ ತಿಳಿ ಹೇಳುವ ಕೆಲಸವಾಗಬೇಕು ಎಂದರು.

ರಾಜ್ಯ ಚುನಾವಣೆಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಮಾತನಾಡಿ, ಗ್ರಾಮಾಂತರ ಭಾಗಗಳಲ್ಲಿ ಮತದಾನದ ಬಗ್ಗೆ ಮಾಹಿತಿ ನೀಡಬೇಕು. ಬುಡಕಟ್ಟು ಸಮುದಾಯದ ಜನರಿಗೂ ಮತದಾನದ ಮಹತ್ವ ತಿಳಿಸಿ ಅವರು ಭಾಗವಹಿಸುವಂತೆ ಪ್ರೇರಿಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ವರ್ಣೀತ್ ನೇಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯಿತ್ರಿ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು, ಇಲವಾಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹದೇವ ಸೇರಿದಂತೆ ಇತರರು ಹಾಜರಿದ್ದರು.


Spread the love