ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕೆ ಸಜ್ಜುಗೊಂಡ ಉಡುಪಿ

Spread the love

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕೆ ಸಜ್ಜುಗೊಂಡ ಉಡುಪಿ

ಉಡುಪಿ: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಗಾಗಿ ಅವತರಿಸಿದ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ, ಉಲ್ಲಾಸ ದೇಗುಲ ನಗರಿ ಉಡುಪಿಯಲ್ಲಿ ಗರಿಗೆದರಿದೆ. ಕೃಷ್ಣನೂರು ಉಡುಪಿಯಲ್ಲಿ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಆರಂಭಗೊಂಡಿದೆ. ಆಗೋಸ್ತ್ 19ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಆಗೋಸ್ತ್ 20ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಎರಡು ವರ್ಷಗಳಿಂದ ಲಾಕ್‌ಡೌನ್‌ ಕಾರಣದಿಂದ ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಷ್ಟಮಿ ಆಚರಣೆ ಅದ್ದೂರಿಯಾಗಿ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಎಂದಿನಂತೆ ಅಷ್ಟಮಿ ಆಚರಣೆ ನಡೆಯಲಿದೆ.

ಜನರಿಗೆ ಅಷ್ಟಮಿ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸಲು ಕೃಷ್ಣಮಠದಲ್ಲಿ ಲಡ್ಡಿಗೆ, ಖಾದ್ಯ ತಯಾರಿಸಲು ಬಾಣಸಿಗರು ಸಿದ್ಧತೆ ಆರಂಭಿಸಿದ್ದಾರೆ. ಬಾಣಸಿಗರಿಂದ ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಾಗಿದೆ.

ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಲಡ್ಡಿಗೆಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ಆಗೋಸ್ತ್ 19 ರಂದು ಬೆಳಗ್ಗೆ ಭೋಜನ ಶಾಲೆಯಲ್ಲಿ ಕೃಷ್ಣಾಪುರ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ.

ರಥಬೀದಿಯಲ್ಲಿ ಆಕರ್ಷಕ ಮಂಟಪ ಸಹಿತ ಗುರ್ಜಿಗಳು ಸಿದ್ಧವಾಗಿದ್ದು ಹಾಲು, ಮೊಸರು, ಓಕುಳಿ ತುಂಬಿ ಒಡೆಯಲು ಮಡಕೆಗಳೂ ರೆಡಿಯಾಗಿವೆ. ಅಷ್ಟಮಿ ಮೂಡೆ ತಯಾರಿಗಾಗಿ ಕೇದಗೆ ಒಲಿ ಖೊಟ್ಟೆ ಮಾರಾಟ ರಥಬೀದಿಯಲ್ಲಿ ಭರದಿಂದ ಸಾಗಿದೆ. ಅಷ್ಟಮಿಯಲ್ಲಿ ಮಕ್ಕಳನ್ನು ಸೆಳೆಯುವ ಪೇಟ್ಲವೂ ಕಾಯಿ ಸಹಿತವಾಗಿ ಮಾರಾಟಕ್ಕೆ ಸಿದ್ಧವಾಗಿದೆ. ನಗರದ ಪ್ರಮುಖ ಹುಲಿವೇಷಧಾರಿಗಳ ತಂಡ ಹುಲಿವೇಷ ಕುಣಿತಕ್ಕೆ ತಯಾರಿ ನಡೆಸಿವೆ. ಪೇಟ್ಲಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.

ಕೃಷ್ಣಮಠದ ಪರಿಸರದಲ್ಲಿ ವಿವಿಧ ವೇಷ ಮತ್ತು ಇತ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆ.19ರ ಬೆಳಗ್ಗೆಯಿಂದ ಸಂಜೆವರೆಗೆ ಏರ್ಪಡಿಸಲಾಗಿದೆ. ಮಧ್ವಾಂಗಣ, ರಾಜಾಂಗಣ, ಬಡಗುಮಾಳಿಗೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸರಕಾರದ ವತಿಯಿಂದ ಈ ವರ್ಷದಿಂದ ಅಷ್ಟಮಿ ಆಚರಣೆ ನಡೆಯುತ್ತಿದ್ದು, ಜಿಲ್ಲಾಡಳಿತ ವತಿಯಿಂದಲೂ ಸಕಲ ತಯಾರಿ ನಡೆದಿದೆ. ಆ. 19ರಂದು ಕೃಷ್ಣಾಪುರ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಹಿತ ಕೃಷ್ಣ ಭಕ್ತರು ನಿರ್ಜಲ ಉಪವಾಸದಲ್ಲಿದ್ದು, ಕೃಷ್ಣ ಸ್ಮರಣೆಯಲ್ಲಿರುತ್ತಾರೆ. ರಾತ್ರಿ ಕೃಷ್ಣ ಪೂಜೆ ಬಳಿಕ 12.21ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನೆರವೇರಲಿದೆ. ಜನರಿಗೆ ಅಷ್ಟಮಿ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸಲು ಕೃಷ್ಣಮಠದಲ್ಲಿ ಲಡ್ಡಿಗೆ, ಖಾದ್ಯ ತಯಾರಿಸಲು ಬಾಣಸಿಗರು ಸಿದ್ಧತೆ ಆರಂಭಿಸಿದ್ದಾರೆ.

ರಥೋತ್ಸವ ಆ. 20ರಂದು ಶ್ರೀಕೃಷ್ಣಲೀಲೋತ್ಸವ ಜರಗಲಿದೆ. ಅಪರಾಹ್ನ 3 ಗಂಟೆ ಬಳಿಕ ರಥೋತ್ಸವ ಜರುಗಲಿದ್ದು ವಿವಿಧ ವೇಷಗಳ ಆಕರ್ಷಣೆಗಳು ಇರಲಿವೆ. ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ವಿಗ್ರಹವನ್ನು ಪೂಜಿಸಿ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯೊಂದಿಗೆ ಬೃಹತ್ ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ ವಿಟ್ಲಪಿಂಡಿ ಸಂಭ್ರಮ ನಡೆಯಲಿದೆ. ಭಕ್ತಜನ ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆದು ಶ್ರೀ ಕೃಷ್ಣನ ಜನನದ ಸಂಭ್ರಮಾಚರಣೆ ಮಾಡಲಿದ್ದಾರೆ.


Spread the love