ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಮಂಗಲಮಹೋತ್ಸವದಲ್ಲಿ ‘ಪರಿಸರ ಸ್ನೇಹಿ’ ಸಭಾ ಭವನ

Spread the love

ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಮಂಗಲಮಹೋತ್ಸವದಲ್ಲಿ ‘ಪರಿಸರ ಸ್ನೇಹಿ’ ಸಭಾ ಭವನ

ಕುಂದಾಪುರ: ಫೆಬ್ರವರಿ 21ರಿಂದ 25ರ ವರೆಗೆ ಸೋದೆ ಶ್ರೀ ವಾದಿರಾಜ ಮಠದ ’ಭಾವೀ ಸಮೀರ ಗುರುಕುಲ’ ದ ವಿದ್ಯಾರ್ಥಿಗಳಿಗೆ ಸುಧಾ ಮಂಗಲ. ಸುಧಾಮಂಗಲವೆಂದರೆ 14 ವರ್ಷ ಗುರುಕುಲದಲ್ಲಿ ಅಧ್ಯಯನ ಮಾಡಿದವರನ್ನು ವಿದ್ವನ್ನಿಕಷಕ್ಕೊಡ್ಡಿ ಪರೀಕ್ಷಿಸುವುದು. ಸುಧಾಮಂಗಲದಲ್ಲಿ ಉತ್ತೀರ್ಣನಾದವರು ವಿದ್ವಾಂಸರೆಂದು ಮಾನಿತರಾಗುತ್ತಾರೆ. ಇದು ವಿಶೇಷವಲ್ಲ. ಇದನ್ನು ಶ್ರೀ ಮಠದ ಯಾವುದೇ ಸಭಾಮಂಟಪದಲ್ಲೂ ನಡೆಸಬಹುದು. ಆದರೆ ಐದು ದಿನಗಳ ಈ ಕಾರ್ಯಕ್ರಮಕ್ಕೆಂದೇ ಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನಿರ್ಮಿಸಿದ ಪ್ರವೇಶ ದ್ವಾರ, ಸಭಾಭವನ, ವೇದಿಕೆ ಎಲ್ಲವೂ ಅವರ ಸಂಸ್ಕೃತಿ ಪ್ರೀತಿಗೂ ಪರಿಸರ ಕಾಳಜಿಗೂ ಉತ್ಕೃಷ್ಠ ಕಲಾ ಸಂಸ್ಕಾರಕ್ಕೂ ಸಾಕ್ಷಿಯಾಗಿವೆ.

ರಾಷ್ಟ್ರೀಯ ಹೆದ್ದಾರಿ 66ರಿಂದ ಕುಂಭಾಸಿ ಮೂಲ ಮಠವು ಅರ್ಧ ಕಿಲೋಮೀಟರ್ ದೂರವೂ ಇಲ್ಲ. ಹೆದ್ದಾರಿಯಿಂದ ಮಠಕ್ಕೆ ತಿರುಗುವಲ್ಲೇ ಸ್ವಾಗತ ದ್ವಾರ ಗಮನ ಸೆಳೆಯುತ್ತದೆ. ಅಲ್ಲಿಂದ ಸುಮಾರು 400 ಮೀಟರ್ ದೂರದುದ್ದಕ್ಕೂ ಗೂಡುದೀಪಗಳು ಕೈಬೀಸಿ ಕರೆಯುತ್ತವೆ. ಟಾರು ರಸ್ತೆಯಲ್ಲಿ ಹಾಕಿದ ಬಿಳಿ ರಂಗವಲ್ಲಿ ವೈವಿಧ್ಯಪೂರ್ಣವಾಗಿದೆ. ಪರೀಕ್ಷಾಂಗಣವಿರುವುದು ಇದಕ್ಕಾಗಿಯೇ ನಿರ್ಮಿಸಿದ ’ಗೌತಮಾಶ್ರಮ’ದಲ್ಲಿ. ಆಶ್ರಮಕ್ಕೆ ತಿರುಗುವಲ್ಲೇ ಮೂರ್ನಾಲ್ಕು ಆಳೆತ್ತರದ ಸ್ವಾಗತ ಗೋಪುರ. ಬೈಹುಲ್ಲು ಸೆಗಣಿಗಳಿಂದ ನಿರ್ಮಿಸಿದ ಎರಡು ಆನೆಗಳ ಪ್ರತಿಕೃತಿ ಎಡಬಲದಲ್ಲಿ. ಮುಂದೆ ಕುಂಭಾಸಿ ಕೊರಗ ಯುವಕರು ಕರಟೆಗಳಿಂದ ರಚಿಸಿದ ಹತ್ತನ್ನೆರಡು ಅಡಿ ಎತ್ತರದ ಇನ್ನೊಂದು ಗೋಪುರ ನಮ್ಮನ್ನು ಆಕರ್ಷಿಸುತ್ತದೆ. ಹಸಿಮಡಲು ಹೆಣೆದು ಮಾಡಿದ ಚಪ್ಪರ, ಅದರದ್ದೇ ಸುತ್ತು ಪ್ರಾಕಾರ, ಅದಕ್ಕೆ ಬಟ್ಟೆಯ ಮೇಲುಗಟ್ಟು. ಒಳ ಹೋಗುತ್ತಿದ್ದಂತೆ, ಸಭಾವಲಯ ನೋಡಿ ವಿಸ್ಮಿತವಾಗುವಂತಿದೆ. ಪರೀಕ್ಷಾ ವೇದಿಕೆ ’ಶ್ರೀ ವಾಗೀಶತೀರ್ಥ ಮಂಟಪ’. ಮಂಟಪದ ಎದುರಿನ ಕಮಾನು, ಅದರ ಸೌಂದರ್ಯವರ್ಧನೆಗೆ ಅಡಕೆ ಹಾಳೆಯಿಂದ ಮಾಡಿದ ವೃತ್ತಾಕಾರದ ಊಟದ ಬಟ್ಟಲನ್ನು ಕೂಡಿಸಿದ ಕ್ರಮ. ಭತ್ತದ ತೆನೆಯನ್ನು ನೇಯ್ದು ಮಾಡಿದ ಮಾಲೆಯ ಗೊಂಡೆ ಮೇಲ್ಗಡೆ ಜೋತುಬಿದ್ದು ವೇದಿಕೆಯೆಂಬ ವನಿತೆಯ ಕೊರಳ ಹಾರದಂತೆ ಶೋಭಿಸುತ್ತಿದೆ. ಹಿನ್ನೆಲೆ ಪರದೆಯಲ್ಲಿ ಬರೆದ ಅಕ್ಷರಗಳೂ ಕಲಾತ್ಮಕ, ಅದರ ಮೇಲ್ಗಡೆ ಅರ್ಧಚಂದ್ರಾಕೃತಿಯಲ್ಲಿ ಪೋಣಿಸಿದ ತೆರೆದ ಮೊರದ (ಬೆತ್ತದ ಗೆರಸಿ) ಸರದ ಸೌಂದರ್ಯವೇ ಬೇರೆ. ಅದರ ಆಚೀಚೆ ಕಂಬದಾಕೃತಿಯ ಗೂಡು, ಪಕ್ಕಕ್ಕೆ ದೃಷ್ಠಿ ಹಾಯಿಸಿದರೆ ಗೋಡೆಯಲ್ಲಿ ಹಾಕಿದ ಚಿತ್ತಾಕರ್ಷಕ ರಂಗವಲ್ಲಿಯ ರಂಗು. ಇವೆಲ್ಲವುಗಳೊಂದಿಗೆ ಶ್ರೀಪಾದರುಗಳ ದಿವ್ಯಸಾನ್ನಿಧ್ಯ ಭವ್ಯತೆಗೆ ದಿವ್ಯತೆಯ ಸ್ಪರ್ಶ ನೀಡಿದೆ.
ಎಲ್ಲಿಯೂ ಪ್ಲಾಸ್ಟಿಕ್ ಬಳಕೆಯಿಲ್ಲ. ಎಲ್ಲವೂ ಸ್ಥಳೀಯವಾಗಿ ದೊರಕುವ ಅಥವಾ ಮಾಡಿದ ಸಾವಯವ ವಸ್ತುಗಳಿಂದಲೇ ನಿರ್ಮಾಣವಾದುದು. ಇದನ್ನೆಲ್ಲಾ ಸ್ಥಳೀಯ ಕುಶಲಕರ್ಮಿಗಳೇ ಸಿದ್ಧಪಡಿಸಿದ್ದು 15-20 ಜನ ವಾರಗಟ್ಟಲೆ ಶ್ರಮಿಸಿದ್ದಾರೆ. ಇದರಿಂದ ನೂರಾರು ದುಡಿಮೆಯ ದಿನಗಳು ಸೃಷ್ಠಿಯಾಗಿವೆ. ಲೆಕ್ಕ ಹಾಕಿದರೆ ಲಕ್ಷಾಂತರ ರೂಪಾಯಿ ವ್ಯಯವಾಗಿವೆ. ರಾಷ್ಟ್ರನಾಯಕ ಸಂಕಲ್ಪಿಸಿದ ವೋಕಲ್ ಫಾರ್ ಲೋಕಲ್’ ಅನುಷ್ಠಾನಕ್ಕೆ ಬಂದಿದೆ. ಈ ಪವಿತ್ರ ವೇದಿಕೆಯಲ್ಲಿ ಹಗಲು ಜ್ಞಾನಸಮಾರಾಧನೆ. ಕತ್ತಲಾಗುತ್ತಿದ್ದಂತೆ ಕಲಾ ಸಮಾರಾಧನೆ. ಇದನ್ನೆಲ್ಲಾ ಕಣ್ತುಂಬಿಕೊಳ್ಳಲು ಭಾಗ್ಯ ಬೇಕು.

ಪೂಜ್ಯ ಶ್ರೀಪಾದರ ಈ ಶ್ರೀಮಂತ ಕಲ್ಪನೆಗೆ ಆಕಾರ ಕೊಟ್ಟು ಸಾಕಾರಗೊಳಿಸಿದವರು ಉಡುಪಿಯ ಹೆಮ್ಮೆಯ ಕಲಾವಿದ ಪುರುಷೋತ್ತಮ ಅಡ್ವೆ. ಜ್ಞಾನ ಯಜ್ಞದ ನಡುವೆಯೂ ಕಲಾ ಯಜ್ಞವನ್ನು ನಡೆಸುತ್ತಾ ಕಲಾಪೋಷಣೆ ಮಾಡುತ್ತಿರುವ ಪೂಜ್ಯ ಶ್ರೀಪಾದರ ಕಲಾಪ್ರೀತಿಗೆ ಕಲಾರಸಿಕರ ಪರವಾಗಿ ಅನಂತ ಅಭಿವಾದನಗಳು.

ಬರಹ: ಪ್ರೊ. ನಾರಾಯಣ ಎಂ. ಹೆಗಡೆ.


Spread the love