ಶ್ರೀ ಹುಲಿ ಮಾಸ್ತಮ್ಮರವರ  ಅದ್ಧೂರಿ ಜಾತ್ರಾ ಮಹೋತ್ಸವ

Spread the love

ಶ್ರೀ ಹುಲಿ ಮಾಸ್ತಮ್ಮರವರ  ಅದ್ಧೂರಿ ಜಾತ್ರಾ ಮಹೋತ್ಸವ

ಸರಗೂರು: ತಾಲೂಕಿನ ಕಾಟವಾಳು  ಗ್ರಾಮದಲ್ಲಿ ಶ್ರೀ ಹುಲಿ ಮಾಸ್ತಮ್ಮರವರ  ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ರಥದ ಉದ್ಘಾಟನೆ ಹಾಗೂ ಕೊಂಡೋತ್ಸವ, ವಿಶೇಷ ಪೂಜೆಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕಾಟವಾಳು ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನವು ವಿದ್ಯುತ್ ದೀಪಗಳಿಂದ ರಾರಾಜಿಸುತ್ತು. ಇದೇ ವೇಳೆ ದೇವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಬೆಳಗಿನ ಜಾವದಿಂದಲೇ ಹೋಮ ಹವನ ನಡೆದವು, ಗಣಪತಿ ಹೋಮ ಪುಣ್ಯ ಕಳಶ ಪ್ರತಿಷ್ಠಾಪನೆ, ದುರ್ಗಾ ಹೋಮ, ಕುಂಕುಮಾರ್ಚನೆ, ಇತರ  ಪೂಜೆ ನೆರವೇರಿದವು.

ದೇವರಿಗೆ ಪಂಜಿನ ಸೇವೆ ಮಹಾಮಂಗಳಾರತಿ ನಡೆಸಲಾಯಿತು. ನಂತರ ದೇವನೂರು ಗುರುಮಲ್ಲೇಶ್ವರ ದಾಸೋಹ ಮಠಾಧ್ಯಕ್ಷ ಮಹಾಂತ ಸ್ವಾಮೀಜಿ ನೂತನ ರಥವನ್ನು  ಉದ್ಘಾಟಿಸಿದರು, ಹಂಚಿಪುರ ಮಠಾ ಧ್ಯಕ್ಷರಾದ ಚೆನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠಾಧ್ಯಕ್ಷರಾದ ಷಡಕ್ಷರ  ಸ್ವಾಮೀಜಿ, ಪಡವಲು ವಿರಕ್ತ ಮಠಾಧ್ಯಾಕ್ಷರಾದ ಮಹಾದೇವ ಸ್ವಾಮೀಜಿ, ಹಂಚಿಪುರ ಮಠದ ಕಿರಿಯ ಸ್ವಾಮೀಜಿಗಳಾದ  ತೋಂಟದಾರ್ಯ  ಸ್ವಾಮೀಜಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ಶ್ರೀ ಹುಲಿ ಮಾಸ್ತಮ್ಮರವರ ಉತ್ಸವ ಮೂರ್ತಿಯನ್ನು ಪೂರ್ಣಕುಂಭ ಕಳಶದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಕುಣಿತ, ಹಾಗೂ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಉತ್ಸವ ಮೂರ್ತಿಯು ದೇವಾಲಯ ತಲುಪಿದ ನಂತರ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿ ಮಹಾಮಂಗಳಾರತಿ ಮಾಡಿ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಶ್ರದ್ಧಾ ಭಕ್ತಿಯಿಂದ ಭಕ್ತರು ತೇರನ್ನು  ಎಳೆದರು. ಬಾಲಕಿಯರು ಪೂರ್ಣ ಕುಂಭ ಕಳಶ ಹೊತ್ತು ಹರಕೆ ತೀರಿಸಿದರು. ಉತ್ಸವ ಮೂರ್ತಿಯು ದೇವಸ್ಥಾನದ ಬಳಿ ಬಂದ ತಕ್ಷಣ ಭಕ್ತರು ಕೊಂಡವನ್ನು ಹಾಯ್ದರು.


Spread the love