ಸಂಕಷ್ಟದಲ್ಲಿ ರಾಜಕೀಯ ಮಾಡುವುದು ದುರ್ದೈವದ ಸಂಗತಿ

Spread the love

ಸಂಕಷ್ಟದಲ್ಲಿ ರಾಜಕೀಯ ಮಾಡುವುದು ದುರ್ದೈವದ ಸಂಗತಿ

ಮೈಸೂರು: 90 ವರ್ಷಗಳಲ್ಲಿಯೇ ಈ ವರ್ಷ ದಾಖಲೆಯ ಮಳೆ ಸುರಿದಿದೆ. ಜನರು ಕಷ್ಟಕ್ಕೆ ಸಿಲುಕಿರುವಾಗಲೂ ರಾಜಕೀಯ ಮಾಡುತ್ತಿರುವುದು ದುದೈರ್ವದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಜೊತೆ ಕೈ ಜೋಡಿಸಿ ಪರಿಹಾರ ಕಾರ್ಯಗಳಿಗೆ ಮುಂದಾಗಬೇಕಿತ್ತು. ಅದು ಬಿಟ್ಟು ಎಲ್ಲದಕ್ಕೂ ಸರ್ಕಾರ ಕಾರಣ ಎಂಬಂತೆ ಆರೋಪಿಸುತ್ತಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಒತ್ತುವರಿ, ರಾಜಕಾಲುವೆ, ಕೆರೆಗಳ ಒತ್ತುವರಿ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೂ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.

ಬೆಂಗಳೂರಿನ 9ವಲಯಗಳ ಪೈಕಿ 2 ವಲಯಗಳಲ್ಲಿ ಮಾತ್ರ ಮಳೆಯಿಂದ ಹೆಚ್ಚಿನ ತೊಂದರೆಯಾಗಿದೆ. ಆದರೆ ಇಡೀ ಬೆಂಗಳೂರಿಗೆ ತೊಂದರೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ತೊಂದರೆಗೊಳಗಾಗಿರುವ ಎರಡು ವಲಯಗಳ ಪೈಕಿ ಒಂದು ವಲಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮತ್ತೊಂದು ವಲಯದಲ್ಲಿ 69 ಕೆರೆಗಳಿವೆ. ಎಲ್ಲ ಕೆರೆಗಳು ಕೋಡಿ ಬಿದ್ದಿರುವುದರಿಂದ ನಿರಂತರವಾಗಿ ನೀರು ಹರಿಯುತ್ತಿದೆ. ಅಲ್ಲದೇ ರಾಜಕಾಲವೆ, ಕೆರೆಗಳ ಒತ್ತುವರಿ ಕಾರಣದಿಂದಲೂ ಆ ಭಾಗದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಮುಂಬರುವ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು. 300ಕೋಟಿ ಪರಿಹಾರ ನೀಡಲಾಗುವುದು ಎಂದರು.

ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಗಳಿಸಿರುವುದು. ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು. ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೂ, ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು.

ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಹಿನ್ನಡೆಯನ್ನು ಗಮನಿಸಿರುವ ನಗರಪಾಲಿಕೆ ಸದಸ್ಯರು ಬಿಜೆಪಿ ಬೆಂಬಲಿಸಿದ್ದಾರೆ. ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಯಿತು. ಸಂಖ್ಯಾ ಬಲದ ಆಧಾರದ ಮೇಲೆ ಸ್ಪರ್ಧೆಗೆ ಮುಂದಾದೆವು ಉಪ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಕೂಡ ಯತ್ನಿಸಿತು. ಆದರೆ ತಾಂತ್ರಿಕವಾಗಿ ಜೆಡಿಎಸ್ ಗೆ ಸೋಲಾಯಿತು ಎಂದು ಹೇಳಿದರು.


Spread the love