Home Mangalorean News Kannada News ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೋಲಿಸ್ ಆದ ಎಸ್ ಪಿ ಅಣ್ಣಾಮಲೈ

ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೋಲಿಸ್ ಆದ ಎಸ್ ಪಿ ಅಣ್ಣಾಮಲೈ

Spread the love

ಉಡುಪಿ: ಮದುವೆ, ಪ್ರವಾಸಿವಾಹನಗಳ ಪರಿಣಾಮ ಬುಧವಾರ ದಿನವಿಡಿ ಪಡುಬಿದ್ರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸ್ವಯಂ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.

image001sp-traffic-regulation-20160421

ಹೆದ್ದಾರಿ ಚತುಷ್ಪತ ಅಗಲಿಕರಣ ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಪಡುಬಿದ್ರೆ ಪೇಟೆಗೆ ಸರ್ವೆ ಸಾಮಾನ್ಯವಾದರೂ ಬುಧವಾರ ಮಾತ್ರ ಬೆಳಿಗ್ಗೆಯಿಂದ ಸಂಜೆ ತನಕ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು.

ಪಡುಬಿದ್ರಿ-ಕಾರ್ಕಳ ಕೂಡು ರಸ್ತೆಯಲ್ಲಿ ಹಾಗೂ ಪಡುಬಿದ್ರಿ ಪೇಟೆ ಮಧ್ಯೆ ಎರಡು ಲಾರಿಗಳು ಕೆಟ್ಟು ನಿಂತಿದ್ದರಿಂದ ಸಮಸ್ಯೆಯಾಗಿದ್ದರೆ, ಮದುವೆ ಮತ್ತು ಪ್ರವಾಸಿಗರಿಂದ ವಾಹನಗಳ ದಟ್ಟಣೆ ಹೆಚ್ಚಾಗಿರುವುದು ಟ್ರಾಫಿಕ್ ಜಾಮ್ ಸಮಸ್ಯೆಗೆ ಇನ್ನೊಂದು ಕಾರಣ.

ಸುಗಮ ರಸ್ತೆ ಸಂಚಾರ ವ್ಯವಸ್ಥೆ ಮಾಡಲು ಪೋಲಿಸರೊಂದಿಗೆ ಸ್ಥಳೀಯ ಪತ್ರಕರ್ತರು ಸೇರಿಕೊಂಡು ದಿನವಿಡಿ ಶ್ರಮಿಸಿದರೂ ಕೂಡ ತುರ್ತು ಕೆಲಸದ ಮೇಲೆ ತೆರಳಬೇಕಾದವರು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ತೀವ್ರ ಕಷ್ಟಪಟ್ಟರು. ಇದೇ ವೇಳೆ ಕಾಪುವಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಕೂಡ ಟ್ರಾಫಿಕ್ ಜಾಮ್ ನಡುವೆ ಸಿಲುಕಿಕೊಂಡರು. ಟ್ರಾಫಿಕ್ ಸಮಸ್ಯೆಯನ್ನು ಅರಿತ ಅವರು ಸ್ವತಃ ಕಾರಿನಿಂದ ಇಳಿದು ಸುಮಾರು ಒಂದು ಗಂಟೆಕಾಲ ಟ್ರಾಫಿಕ್ ನಿರ್ವಹಿಸಿ ಗಮನ ಸೆಳೆದರಲ್ಲದೆ ಸುಮಾರು 2 ಕಿಮಿ ತನಕ ನಡೆದೇ ಹೋದರು.

ಸಂಜೆ ವೇಳೆಗೆ ಟ್ರಾಫಿಕ್ ಸಮಸ್ಯೆಯ ಗಂಭೀರತೆಯನ್ನು ಅರಿತ ಉಡುಪಿ ಎಸ್ಪಿ ಅಣ್ಣಾಮಲೈ ಖುದ್ಧಾಗಿ ಪಡುಬಿದ್ರಿಗೆ ಆಗಮಿಸಿ ಸ್ವತಃ ಕೈಯಲ್ಲಿ ಬೆತ್ತ ಹಿಡಿದು ಟ್ರಾಫಿಕ್ ನಿರ್ವಹಿಸಿ ಪೋಲಿಸರಿಗೆ ಬೆಂಗಾವಲಾಗಿ ನಿಂತರು. ಸುಮಾರು ಒಂದು ಗಂಟೆಗಳ ಕಾಲ ಸ್ವತಃ ರಸ್ತೆಯಲ್ಲಿ ನಿಂತು ರಸ್ತೆ ಸಂಚಾರ ಸುಗಮಗೊಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಎಎಸ್ಪಿ ಡಾ ಸುಮನಾ ಟ್ರಾಫಿಕ್ ಸಮಸ್ಯೆಯ ಕುರಿತು ಮಾಹಿತಿ ಸಂಗ್ರಹಿಸಿ ಒಂದೆರಡು ದಿನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


Spread the love

Exit mobile version