
ಸಂಚಾರ ಸುವ್ಯವಸ್ಥೆ, ಅಪಘಾತಗಳನ್ನು ತಡೆಗಟ್ಟಲು ಪೊಲೀಸರಿಗೆ ‘ಕೋಬ್ರಾ’ ದ್ವಿಚಕ್ರ ವಾಹನ ಹಸ್ತಾಂತರ
ಮಂಗಳೂರು: ನಗರ ವ್ಯಾಪ್ತಿಯಲ್ಲಿ ಸಂಚಾರ ಸುವ್ಯವಸ್ಥೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರಿಗೆ ಕೋಬ್ರಾ ದ್ವಿಚಕ್ರ ವಾಹನಗಳನ್ನು ನಗರ ಪೊಲೀಸ್ ಆಯುಕ್ತರು ಹಸ್ತಾಂತರ ಮಾಡಿದರು.
ಮಂಗಳೂರು ನಗರದ ರಸ್ತೆಗಳಲ್ಲಿ ವಾಹನದ ಸಂಚಾರದ ಒತ್ತಡ ಅತೀ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಂತೂ ಸಂಚಾರ ಪೊಲೀಸರಿಗೆ ಸಂಚಾರ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸಿದೆ. ನಗರದಲ್ಲಿ ಸುಗಮ ಸಂಚಾರವನ್ನು ಜಾರಿ ಮಾಡಲು ಎಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಬಳಸಿದರೂ ಸಹ ಸಂಚಾರ ಪೊಲೀಸರ ಇರುವಿಕೆಯು ಅನಿವಾರ್ಯವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಅಫಘಾತ ಸಂಭವಿಸಿ ವಾಹನ ಸವಾರರುಗಳು ಜಗಳವಾಡಿಕೊಂಡ ಸಂದರ್ಭದಲ್ಲಿ ವಾಹನಗಳನ್ನು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಾರೆ.
ಇಂತಹ ಹಲವಾರು ಸಮಯದಲ್ಲಿ ಆ ಸ್ಥಳಕ್ಕೆ ಹೋಗಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿಯಾಗುವಂತೆ ಮಂಗಳೂರು ನಗರದಲ್ಲಿ ನಾಲ್ಕು ಕೋಬ್ರಾ ದ್ವಿಚಕ್ರ ವಾಹನಗಳನ್ನು ಸಂಚಾರ ಪೂರ್ವ ಪೊಲೀಸ್ ಠಾಣೆ ಮತ್ತು ಸಂಚಾರ ಪಶ್ಚಿಮ ಪೊಲೀಸ್ ಠಾಣೆಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಕೋಬ್ರಾ ದ್ವಿಚಕ್ರ ವಾಹನಗಳನ್ನು ಠಾಣಾ ಸರಹದ್ದಿನಲ್ಲಿ ಉಪಯೋಗಿಸಿಕೊಂಡು ಸಂಚಾರ ಸುವ್ಯವಸ್ಥೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹಾಗೂ ನೊಂದವರಿಗೆ ಸಹಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.