ಸಂತಕವಿ ಸರ್ವಜ್ಞರದ್ದು, ಸಾಮಾಜಿಕ ನ್ಯಾಯಪರ ಸಾಹಿತ್ಯ: ಡಾ. ಕುಮಾರ್

Spread the love

ಸಂತಕವಿ ಸರ್ವಜ್ಞರದ್ದು, ಸಾಮಾಜಿಕ ನ್ಯಾಯಪರ ಸಾಹಿತ್ಯ: ಡಾ. ಕುಮಾರ್

ಮಂಗಳೂರು: ಸರ್ವಜ್ಞನ ವಚನಗಳಲ್ಲಿ ವ್ಯಕ್ತವಾಗುವ ತಾತ್ಪರ್ಯಗಳನ್ನು ಅನಕ್ಷರಸ್ಥರು ಸುಲಭವಾಗಿ ಗ್ರಹಿಸಬಹುದಾಗಿದೆ, ಸಾಮಾಜಿಕ ನ್ಯಾಯಪರ ಸಾಹಿತ್ಯವನ್ನು ಆಡು ಭಾಷೆಯಲ್ಲಿ ತಲುಪಿಸಿದ ಸಂತಕವಿ ಸಮಾಜದ ಅಂಕುಡೊಂಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿದ್ದಲೆತ್ನಿಸಿದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ಫೆ. 20ರ ಸೋಮವಾರ ನಗರದ ತುಳು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘದ ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ/ ಕುಂಬಾರರ ಯುವ ವೇದಿಕೆ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂತಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ವಜ್ಞರು ಸಮಾಜವನ್ನು ಸಮಾಜದ ಕೆಡುಕುಗಳನ್ನು ತಿದ್ದಲು ನೀಡಿದ ಕೊಡುಗೆಗಳು ಅತ್ಯಮೂಲ್ಯ, 16ನೇ ಶತಮಾನ ಅವರ ಕಾಲಘಟ್ಟ, ಜನಸಾಮಾನ್ಯರು ಸಂಸ್ಕೃತ ಕಲಿಯಲು ಕಷ್ಟವಿದ್ದಂತ ಆ ಕಾಲದಲ್ಲಿ ಸರಳ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುವಂತೆ ಸಾಮಾಜಿಕ ನ್ಯಾಯಪರದ ಸಾರವನ್ನು ತಲುಪಿಸಿದ್ದವರಾಗಿದ್ದಾರೆ ಎಂದರು.

ಮೌಲ್ಯಗಳು ಕಳೆದುಹೋಗುತ್ತಿರುವ ಸಂದರ್ಭದಲ್ಲಿ ಮಾನವನ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಸರ್ವಜ್ಞನ ತ್ರಿಪದಿ ಸಹಕಾರಿಯಾಗಿದೆ, ಉದಾತ್ತ ಆದರ್ಶ ಮೌಲ್ಯಗಳ ಮೂಲಕ ಸದಾ ನಮ್ಮನಡುವೆ ಅವರು ಜೀವಂತವಾಗಿದ್ದಾರೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೀನ್ಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಬೈಲ್ ಮೂಲೆಯವರು, ಜ್ಞಾನದಿಂದ ಎಲ್ಲವನ್ನು ಗೆಲ್ಲಬಹುದು ಎಂಬ ವಿಚಾರವನ್ನು ಸರ್ವಜ್ಞರು ತಿಳಿಸಿದರು, ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಮಾತಾಡದ ವಿಷಯವಿಲ್ಲ, ಅವರು ಯಾವುದೇ ಜಾತಿಗೆ ಸೀಮಿತರಲ್ಲ ಅವರ ವಚನಗಳದ್ದೇ ಜಾತಿಯಾಗಿದೆ, ಸರ್ವಜ್ಞರ ಜಯಂತಿ ಸಮುದಾಯದ ಜಯಂತಿ ಎಂದರು.

 ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ‌್ಯಾಧ್ಯಕ್ಷ ಎಂ.ಅಣ್ಣಯ್ಯ ಕುಲಾಲ್, ಕರಾವಳಿ ಕುಲಾಲ ಕುಂಬಾರರ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ ಭಂಜನ್, ಜಿಲ್ಲಾ ಮೂಲ್ಯರ ಯಾನೆ ಮಾತೃಸಂಘ ಅಧ್ಯಜಕ್ಷ ಮಯೂರ್ ಉಳ್ಳಾಲ್, ಜಿಲ್ಲಾ ಕರಾವಳಿ ಕುಲಾಲ ಕುಂಬಾರರ ವೇದಿಕೆ ಸುಕುಮಾರ ಬಂಟ್ವಾಳ ಮುಖ್ಯ ಅತಿಥಿಗಳಾಗಿದ್ದರು. ಕುಲಾಲ ಸಂಘದ ಬಬಿತಾ, ಅನಿಲ್‌ದಾಸ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.


Spread the love