ಸಂಸದೆ ಶೋಭಾರವರೇ ಸುಳ್ಳು ಹೇಳಿಕೆಗಳನ್ನು ನೀಡಿ, ದಾರಿ ತಪ್ಪಿಸುವ, ಗೊಂದಲ ಸೃಷ್ಟಿಸುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ – ಸ್ಟೇನಿ  ಲೋಬೊ

Spread the love

ಸಂಸದೆ ಶೋಭಾರವರೇ ಸುಳ್ಳು ಹೇಳಿಕೆಗಳನ್ನು ನೀಡಿ, ದಾರಿ ತಪ್ಪಿಸುವ, ಗೊಂದಲ ಸೃಷ್ಟಿಸುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ – ಸ್ಟೇನಿ  ಲೋಬೊ

ಮಂಗಳೂರು: ಕೋವಿಡ್ ಲಸಿಕೆ ಪಡೆಯದಂತೆ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರ ಬೇಜವಾಬ್ದಾರಿಯುತ ಹೇಳಿಕೆಯನ್ನು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ತೀವ್ರವಾಗಿ ಖಂಡಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಚರ್ಚುಗಳಲ್ಲಿ ಕೆಥೊಲಿಕ್ ಸಭಾ ನೇತೃತ್ವದಲ್ಲಿ ಕೋವಿಡ್ ವಾರಿಯರ್ಸ್ ಮೂಲಕ ಯಾವುದೇ ಪ್ರಚಾರ ಬಯಸದೆ ತನ್ನ ಸೇವೆಯನ್ನು ನಮ್ಮ ಕ್ರೈಸ್ತ ಸಮುದಾಯ ಮಾಡುತ್ತಾ ಬಂದಿದೆ. ಜಾತಿ, ಮತ, ಭೇಧವಿಲ್ಲದೆ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುವ ಕಾರ್ಯವಲ್ಲದೆ, ಸ್ವತಃ ಸಂಘಟನೆಯ ವಾರಿಯರ್ಗಳೇ ಸಾರ್ವಜನಿಕರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸುವ ಪುಣ್ಯ ಕೆಲಸ ಮಾಡುತ್ತಿದ್ದಾರೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು, ಸಭಾಂಗಣಗಳನ್ನು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಮಾರ್ಪಡಿಸಿ ಇಲಾಖೆಗೆ, ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ ಎಂಬುದನ್ನು ಸಂಸದರು ಮರೆಯಬಾರದು.

ಪೂಜ್ಯ ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು, ಕ್ರೈಸ್ತ ಮುಖಂಡರುಗಳು ತಾವೇ ಮುಂದೆ ನಿಂತು ವ್ಯಾಕ್ಸಿನ್ ಪಡೆಯಲು ಪ್ರೋತ್ಸಾಹಿಸುತ್ತಾರೆ. ಹೀಗಿರುವಾಗ ಚರ್ಚುಗಳಲ್ಲಿ ಜನರು ವ್ಯಾಕ್ಸಿನ್ ಹಾಕಿಸಬಾರದು ಎಂದು ಪ್ರಚುರಪಡಿಸಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಸುಳ್ಳು ಆರೋಪ ಖೇದಕರ ಹಾಗೂ ನೋವಿನ ಸಂಗತಿ. ಕೋವಿಡ್-19 ಸಂಕಷ್ಟದ ಕಾಲಘಟ್ಟದಲ್ಲಿ ಲಾಕ್ಡೌನ್ನಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಜಾತಿ, ಮತ, ಭೇಧವಿಲ್ಲದೆ ಫುಡ್ ಕಿಟ್ಗಳನ್ನು, ವೈದ್ಯಕೀಯ ನೆರವನ್ನು ನೀಡುವ ಮೂಲಕ ಕ್ರೈಸ್ತ ಸಮುದಾಯ ತನ್ನ ವಿಶೇಷ ಸೇವೆಯನ್ನು ಸಮಾಜಕ್ಕೆ ನೀಡುತ್ತಿದೆ. ಪ್ರಚಾರ ಬಯಸದೆ ಕೇವಲ ಮಾನವೀಯ ಸೇವೆ ಎಂದು ಪರಿಗಣಿಸಿ ಎಲ್ಲಾ ಚರ್ಚ್ ಹಂತಗಳಲ್ಲಿ ಈ ಪುಣ್ಯ ಕೆಲಸ ಮಾಡಲಾಗುತ್ತಿದೆ.

ಸಂಸದೆ ಶೋಭಾ ಕರಂದ್ಲಾಜೆಯವರು ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುವ ಬದಲು, ರಾಜ್ಯದ, ಕ್ಷೇತ್ರದ ಎಲ್ಲಾ ಜನತೆಗೆ ಶೀಘ್ರ ಲಸಿಕೆ ಸಿಗುವಂತೆ ಕ್ರಮ ಕೈಗೊಂಡು ಜನರ ಪರದಾಟ, ಸಂಕಷ್ಟವನ್ನು ನಿವಾರಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತೇವೆ. ಕೋವಿಡ್ ಕಷ್ಟಕಾಲದಲ್ಲಿ ಜನಪ್ರತಿನಿಧಿಗಳು, ಸರಕಾರ, ಜಿಲ್ಲಾಡಳಿತ, ವಿವಿಧ ಇಲಾಖೆಗಳು ತೆಗೆದುಕೊಳ್ಳುವ ಎಲ್ಲಾ ಜನಪರ ಕಾರ್ಯಗಳಿಗೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಸಂಪೂರ್ಣ ಸಹಕಾರ ನೀಡುತ್ತದೆ, ಈ ಬಗ್ಗೆ ಈಗಾಗಲೇ ಸಂಘಟನೆಯು ಜಿಲ್ಲಾಧಿಕಾರಿಯವರಿಗೆ ಪ್ರಕಾರ ಪತ್ರ ಮುಖೇನ ತಿಳಿಸಿರುತ್ತದೆ ಎಂಬುದಾಗಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊ ತಿಳಿಸಿದ್ದಾರೆ.


Spread the love