
ಸಂಸದೆ ಶೋಭಾ ಕರಂದ್ಲಾಜೆಯವರೇ ಸಂತೆಕಟ್ಟೆ ಸಮಸ್ಯೆ ಬಗೆಹರಿಸಿ ಇಲ್ಲ ರಾಜೀನಾಮೆ ನೀಡಿ – ಪ್ರಖ್ಯಾತ್ ಶೆಟ್ಟಿ
ಉಡುಪಿ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಅಂಡರ್ ಪಾಸ್ ಕಾಮಾಗಾರಿ ಅವೈಜ್ಞಾನಿಕವಾಗಿದ್ದರ ಪರಿಣಾಮ ಒಂದು ಭಾಗದ ಸರ್ವಿಸ್ ರಸ್ತೆ ಕುಸಿತ ಕಂಡಿದ್ದು ಇದರಿಂದ ಕರಾವಳಿಯ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66 ತುಂಡಾಗುವ ಅಪಾಯವಿದ್ದು ಇದಕ್ಕೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಲು ವಿಫಲರಾದ ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ನಾಗರಿಕರು ಸೇರಿಕೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ ಹೇಳಿದರು.
ಅವರು ಬುಧವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿಯಿಂದಾಗಿರುವ ಅವ್ಯವಸ್ಥೆಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ನೇರ ಹೊಣೆಯಾಗಿದ್ದಾರೆ. ಉಡುಪಿ ಸಂಸದೆಯವರು ಕೇವಲ ಎಲ್ಲಿ ಹೆಣ ಬಿದ್ದಾಗ ಬಂದು ಬೊಬ್ಬಿರುವುದು ಬಿಟ್ಟರೆ ಜನರ ಸಮಸ್ಯೆಗಳು ಎದುರಾದಾಗ ತುಟಿ ಬಿಚ್ಚದೆ ಮೌನವಾಗಿರುತ್ತಾರೆ. ಇತ್ತೀಚೆಗೆ ಉಡುಪಿಯಲ್ಲಿ ಭಾರಿ ಮಳೆಯಿಂದ 7 ಜೀವ ಹಾನಿ ಸಂಭವಿಸಿದ್ದು ಕೊಟ್ಯಾಂತರ ರೂಪಾಯಿ ನಷ್ಟವಾಗಿದ್ದು ಈ ಬಗ್ಗೆ ಅವರಿಗೆ ಯಾವುದೇ ರೀತಿಯ ಚಿಂತೆಯೇ ಇಲ್ಲವೆಂಬಂತೆ ಮಿಜೋರಾಂ ಇನ್ನಿತರ ರಾಜ್ಯಗಳ ಪ್ರವಾಸದಲ್ಲೇ ಮಗ್ನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಂತೆಕಟ್ಟೆ ಅಂಡರ್ ಪಾಸ್ ಬಳಿಯ ಒಂದು ಭಾಗದ ಸರ್ವಿಸ್ ರಸ್ತೆ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಆದರೆ ಈ ಬಗ್ಗೆ ಸಂಸದರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಕಳೆದ ತಿಂಗಳು ಬಂದ ಸಂಸದರು ಈಗಾಗಲೇ ತೆರೆದಿರುವ ಗುಂಡಿಯನ್ನು ಮುಚ್ಚಲು ಆದೇಶ ನೀಡಿ ಹೋಗಿದ್ದಾರೆ ಆದರೆ ಗುಂಡಿಯಿಂದ ತೆಗೆದ ಮಣ್ಣು ಅವರ ಹಿಂಬಾಲಕರ ಪಾಲಾಗಿದ್ದು ಮತ್ತೆ ಆ ಗುಂಡಿಯನ್ನು ಮುಚ್ಚಲು ಅಷ್ಟೊಂದು ಮಣ್ಣನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.
ಗುಂಡಿಯನ್ನು ಮುಚ್ಚಲು ಹೇಳುವ ಬದಲು ಸಂಸದರು ಈಗಾಗಲೇ ಎಲ್ಲಿ ಬಂಡೆ ಸಿಕ್ಕಿದೆಯೋ ಆ ಭಾಗವನ್ನು ಬಿಟ್ಟು ಉಳಿದ ಭಾಗದ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡದೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದರಲ್ಲೇ ಮಗ್ನರಾಗಿದ್ದಾರೆ. ಈಗಾಗಲೇ ಕುಸಿತ ಕಂಡಿರುವ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳಿದ್ದು, ಸರ್ವಿಸ್ ರಸ್ತೆ ತುಂಡಾಗಿರುವುದರಿಂದ ಸ್ಥಳೀಯ ಸುಮಾರು 300ಕ್ಕೂ ಅಧಿಕ ಕುಟುಂಬಗಳು ಸಮಸ್ಯೆಯನ್ನು ಅನುಭವಿಸುತ್ತಿವೆ ಇದರ ಪರಿವೆಯೇ ಇಲ್ಲದೆ ಇರುವ ಸಂಸದರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ ಇಲ್ಲವಾದರೆ ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ರಾಷ್ಟ್ರೀಯ ಹೆದ್ದಾರಿಗೆ ತಡೆಬೇಲಿಯನ್ನು ಹಾಕಿ ಮುಚ್ಚುವುದರ ಮೂಲಕ ಪ್ರತಿಭಟನೆ ನಡೆಸಲಾಗುವುದು. ಜನರ ಸಮಸ್ಯೆಗೆ ಪರಿಹಾರ ನೀಡುವ ಮನಸ್ಥಿತಿ ಸಂಸದರಿಗೆ ಇನ್ನಾದರೂ ಬರಲಿ ಎಂಬುದು ನಮ್ಮ ಅಪೇಕ್ಷೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭಾ ಸದಸ್ಯ ಜಯಾನಂದ, ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರಾ, ಸೂರಜ್, ಪ್ರದೀಪ್ ಅಂಚನ್ ಉಪಸ್ಥಿತರಿದ್ದರು.