ಸಕಲ ಸರ್ಕಾರಿ ಗೌರವಗಳೊಂದಿಗೆ ಎಜಿ ಕೊಡ್ಗಿ ಅಂತ್ಯಕ್ರಿಯೆ

Spread the love

ಸಕಲ ಸರ್ಕಾರಿ ಗೌರವಗಳೊಂದಿಗೆ ಎಜಿ ಕೊಡ್ಗಿ ಅಂತ್ಯಕ್ರಿಯೆ

ಕುಂದಾಪುರ : ಅನಾರೋಗ್ಯದ ಹಿನ್ನೆಲೆ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ತಾಲ್ಲೂಕಿನ ಅಮಾಸೆಬೈಲಿನ ಮೃತರ ಸ್ವಗ್ರಹದ ಸಮೀಪದ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

ಸೋಮವಾರ ರಾತ್ರಿ ಮೃತದೇಹವನ್ನು ಅಮಾಸೆಬೈಲಿನಲ್ಲಿರುವ ಅವರ ಮನೆಗೆ ತರಲಾಗಿದ್ದು, ಮಂಗಳವಾರ ಬೆಳಿಗ್ಗೆ ಮನೆಯ ಸಮೀಪದ ಗೋಕುಲ್ ಗೇರು ಕಾರ್ಖಾನೆಯ ಆವರಣದೊಳಗೆ ಮೃತ ದೇಹವನ್ನು ಇರಿಸಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಎಜಿ ಕೊಡ್ಗಿಯವರ ಅಭಿಮಾನಿಗಳು ಹಾಗೂ ಕುಟುಂಬಿಕರು ಸಾವಿರಾರು ಸಂಖ್ಯೆಯಲ್ಲಿ ದರ್ಶನ ಪಡೆದುಕೊಂಡು ಅಂತಿಮ ನಮನಗಳನ್ನು ಸಲ್ಲಿಸಿದರು.

ಸರ್ಕಾರಿ ಗೌರವ: ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಗಾಳಿಯಲ್ಲಿ 3 ಬಾರಿ ಕುಶಾಲು ತೋಪುಗಳನ್ನು ಸಿಡಿಸಿ ಗೌರವ ರಕ್ಷೆ ನೀಡಲಾಯಿತು. ಮೃತ ದೇಹಕ್ಕೆ ಹೊದಿಸಲಾದ ತ್ರಿವರ್ಣ ಧ್ವಜವನ್ನು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಗ್ರೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‍ಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರಣಿಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಜಿಲ್ಲಾ ಎಸ್.ಪಿ ಎನ್.ವಿಷ್ಣುವರ್ಧನ್ ಇದ್ದರು.

ಮಧ್ಯಾಹ್ನದ ಬಳಿಕ ಮೃತ ದೇಹವನ್ನು ಮರಳಿ ಮೂಲ ಮನೆಗೆ ತೆಗೆದುಕೊಂಡು ಹೋಗಿ, ಕುಟುಂಬದ ಪುರೋಹಿತರ ಮಾರ್ಗದರ್ಶನದಲ್ಲಿ ಅಂತ್ಯವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಮನೆಯ ಸಮೀಪದ ತೋಟದಲ್ಲಿ ನಿರ್ಮಿಸಲಾದ ಚಿತೆಯಲ್ಲಿ ಹಿಂದೂ ಬ್ರಾಹ್ಮಣ ಪದ್ಧತಿಯಂತೆ ಅಗ್ನಿಸ್ವರ್ಶ ಮಾಡಿ ಅಂತ್ಯಕ್ರಿಯೆ ನಡೆಸಲಾಯಿತು.

ಮಕ್ಕಳಾದ ಅಶೋಕಕುಮಾರ ಕೊಡ್ಗಿ, ಕಿಶೋರಕುಮಾರ ಕೊಡ್ಗಿ( ಕ್ಯಾಂಪ್ಕೋ ಅಧ್ಯಕ್ಷ ), ಆನಂದ ಕೊಡ್ಗಿ, ಕುಮಾರ ಕೊಡ್ಗಿ, ಕಿರಣಕುಮಾರ ಕೊಡ್ಗಿ ( ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ) , ಪುತ್ರಿ ಶಶಿ, ಸಹೋದರ ಅನಂತಕೃಷ್ಣ ಕೊಡ್ಗಿ ಹಾಗೂ ಕುಟುಂಬಿಕರು ಪಾಲ್ಗೊಂಡಿದ್ದರು.


Spread the love