
ಸಚಿವ ಜಮೀರ್ ಅಹಮದ್ ಅವರಿಂದ ದಿಢೀರ್ ಹಾಸ್ಟೆಲ್ ಭೇಟಿ: ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು
ಮಂಗಳೂರು: ಜಿಲ್ಲೆಯ ಪ್ರವಾಸದಲ್ಲಿರುವ ವಸತಿ, ವಕ್ಪ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ದಿಢೀರ್ ಹಾಸ್ಟೆಲ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾ ಮಂಡಲವಾದರು.
ಅವರು ಸೆ.5ರ ಮಂಗಳವಾರ ಸಂಜೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಹಾಸ್ಟೆಲ್ ನಲ್ಲಿ ಶುಚಿತ್ವ ಕಾಪಾಡದಿರುವುದು, ಶೌಚಾಲಯ ನಿರ್ವಹಣೆ ಸರಿ ಇಲ್ಲದಿರುವುದು ಕಂಡು ಬಂದಿರುತ್ತದೆ.
ಇದೇ ವೇಳೆ ಅಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಕೊಡುತ್ತಿಲ್ಲ, ವಾರಕ್ಕೊಮ್ಮೆ ಚಿಕನ್ ನೀಡದೇ ಹದಿನೈದು ದಿನಕ್ಕೆ ಚಿಕನ್ ನೀಡಲಾಗುತ್ತಿದೆ. ಚಾರ್ಟ್ ಪ್ರಕಾರ ಆಹಾರ ಪೊರೈಕೆ ಮಾಡುತ್ತಿಲ್ಲ ಎಂದು ದೂರಿದರು.
ಐದು ವರ್ಷ ಆದರೂ ಬೆಡ್ ಶೀಟ್ ಕೊಟ್ಟಿಲ್ಲ, ತಲೆದಿಂಬು ಇಲ್ಲ, ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವರ ಸಮ್ಮುಖದಲ್ಲಿ ಆರೋಪಿಸಿದರು.
ತಕ್ಷಣ ಸಚಿವರು ತಾಲೂಕು ವಿಸ್ತರಣಾ ಅಧಿಕಾರಿ ಮಂಜುನಾಥ್ ಅವರನ್ನು ಸ್ಥಳದಲ್ಲೇ ಅಮಾನತು ಮಾಡಿ ಆದೇಶ ಹೊರಡಿಸಿದರು.
ಡಿ.ಎಂ.ಒ ಜಿನೇಂದ್ರ ಹಾಗೂ ವಾರ್ಡನ್ ಅಶೋಕ್ ಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಿದರು.