ಸಚಿವ ಸ್ಥಾನಕ್ಕೆ ಲಾಬಿ ಮಾಡ್ತಿನಾ: ರಮೇಶ್ ಜಾರಕಿಹೊಳಿ!

Spread the love

ಸಚಿವ ಸ್ಥಾನಕ್ಕೆ ಲಾಬಿ ಮಾಡ್ತಿನಾ: ರಮೇಶ್ ಜಾರಕಿಹೊಳಿ!

ಮೈಸೂರು: ಹೊಸ ಸರ್ಕಾರವನ್ನು ಆಡಳಿತಕ್ಕೆ ತರುವ, ಒಬ್ಬ ಶಾಸಕನನ್ನು ಸಚಿವನಾಗಿ ಮಾಡುವ ಶಕ್ತಿಯಿರುವ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತೇನಾ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಉಭಯಕುಶಲೋಪರಿ ನಡೆಸಿದ ಬಳಿಕ ಮಾತನಾಡಿದ ಅವರು, ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಅವರು ನಿಧನರಾದ ಹಿನ್ನಲೆಯಲ್ಲಿ ಭೇಟಿ ಮಾಡಲು ಬಂದಿದ್ದೇನೆಯೇ ಹೊರತು  ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸಲು ಅಲ್ಲ ಆ ಸ್ಥಿತಿಗೆ ನಾನು ಬಂದಿಲ್ಲ. ಇಲ್ಲಿ ಯಾವ ರಾಜಕಾರಣವನ್ನು ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಸರ್ಕಾರವನ್ನು ಆಡಳಿತಕ್ಕೆ ತರುವ ಶಕ್ತಿ ಇರುವ ನಾನು  ಸಚಿವನಾಗೋಕೆ ಲಾಬಿ ಮಾಡಲ್ಲ. ಕೇಳಿದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದು ನಿಜ ಆದರೆ ಹಿರಿಯರ ಸಲಹೆ ಮೇರೆಗೆ ಕೈಬಿಟ್ಟಿದ್ದೇನೆ. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಯಡಿಯೂರಪ್ಪ  ಅವರು ಎರಡು ವರ್ಷ ಪೂರೈಸುತ್ತಾರಲ್ಲದೆ, ಮುಂದಿನ ಚುನಾವಣೆಯು ಅವರ ನೇತೃತ್ವದಲ್ಲಿಯೇ ನಡೆಯಲಿದೆ. ನಂತರದ ತೀರ್ಮಾನ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ಕಾಂಗ್ರೆಸ್ ಗೆ  ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಮುಳುಗುವ ಹಡಗು ನಾನೇಕೆ ಆ ಪಕ್ಷಕ್ಕೆ ಹೋಗಲಿ, ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ. ಆದರೆ ನಾನು ಮುಂಬೈಗೆ ಹೋಗಿದ್ದು  ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಲಷ್ಟೆ ಅವರು  ನನ್ನ ರಾಜಕೀಯ ಗಾಡ್ ಫಾದರ್ ಆಗಿದ್ದು, ಅವರೊಂದಿಗೆ ನನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿರುವುದಾಗಿ ತಿಳಿಸಿದರು.

ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡುವ ಮುನ್ನ ವಿಶೇಷ ವಿಮಾನ ಮೂಲಕ  ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ‌ ಬಂದಿಳಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಜಂಗಲ್ ಲಾಡ್ಜ್ ಅಧ್ಯಕ್ಷ ಅಪ್ಪಣ್ಣ  ಅವರು, ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಅವರೊಂದಿಗೆ ಜಾರಕಿಹೊಳಿಗೆ ಸಹೋದರ್ ಲಖನ್, ಅಳಿಯ ಅಂಬಿರಾಯ ಪಾಟೀಲ್‌ಸಾತ್ ಇದ್ದರು.


Spread the love