ಸಚಿವ ಸ್ಥಾನ ನೀಡದಿರುವುದರಿಂದ ಬೇಸರ: ಈಶ್ವರಪ್ಪ

Spread the love

ಸಚಿವ ಸ್ಥಾನ ನೀಡದಿರುವುದರಿಂದ ಬೇಸರ: ಈಶ್ವರಪ್ಪ

ಮೈಸೂರು: ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ  ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ದಲಿತರಿಗೆ ಕಲ್ಪಿಸಿರುವ ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದು, ದಲಿತ ಸಮುದಾಯದಲ್ಲಿ ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಆದ್ದರಿಂದ ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿ ನೀಡಬಾರದು  ಎಂದರು. ಬೆಟ್ಟಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಬೆಟ್ಟಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  ಸ್ವಾಭಿಮಾನದ ಬದುಕು ಸಿಗುವವರೆಗೂ ದಲಿತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ ಖರ್ಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೀಸಲಾತಿ ನೀಡುವಾಗ ಕಡುಬಡವರಿಗೆ ಆದ್ಯತೆ ನೀಡಬೇಕು ಎಂದರು.

ಇಡಿ  ನೋಟಿಸ್ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ವ್ಯಂಗ್ಯವಾಡಿದ ಈಶ್ವರಪ್ಪ ಅವರು, ಭಾರತ್ ಜೋಡೊ ಯಾತ್ರೆಯ ಸಿದ್ದತೆಯಲ್ಲಿರುವಾಗ, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಇಡಿ ನೋಟಿಸ್ ನೀಡಿರುವುದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಬೇಲ್ ಮೇಲೆ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು.

ಮತಾಂತರ ನಿಷೇಧ ಕಾಯ್ಧೆ ಮಸೂದೆ ಮಂಡನೆ ವೇಳೆ ಬಿಲ್ ಪ್ರತಿಯನ್ನು ಹರಿದ ಕಾಂಗ್ರೆಸ್ ಕ್ರಮ ಖಂಡನೀಯ. ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು  ಓಲೈಸಲು ಕಾಂಗ್ರೆಸ್ ಸದಸ್ಯರು ಈ ರೀತಿ ಮಾಡಿದ್ದಾರೆ ಎಂದರು.


Spread the love