ಸಜಿಪ : ಮಹಿಳೆಗೆ ಕಾರು ಢಿಕ್ಕಿ; ಗಂಭೀರ ಗಾಯ
ಬಂಟ್ವಾಳ : ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜ ಕಟ್ಟೆ ಬಳಿ ಬುಧವಾರ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ.
ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಗುಳಿಗಜ್ಜ ಕಟ್ಟೆಗೆ ಹಣ ಹಾಕಲು ಹೆದ್ದಾರಿ ರಸ್ತೆಯ ಅಂಚಿಗೆ ತಲುಪಿದಾಗ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಕೃಷ್ಣ ಶ್ಯಾಮ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳು ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
