ಸದನಕ್ಕೆ ಶಾಸಕರ ಹಾಜರಿ ಕಡ್ಡಾಯ:ಕಾಗೇರಿ

Spread the love

ಸದನಕ್ಕೆ ಶಾಸಕರ ಹಾಜರಿ ಕಡ್ಡಾಯ:ಕಾಗೇರಿ

ಬೆಂಗಳೂರು: ರಾಜ್ಯ ವಿಧಾನ ಸಭೆಯ 15ನೇ ಅಧಿವೇಶನದ 15 ನೇ ಉಪವೇಶನಕ್ಕೆ ಎಲ್ಲಾ ಸದಸ್ಯರು ಹಾಜರಾಗಬೇಕೆಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವು ಪ್ರಜಾಪ್ರಭುತ್ವದ ದೇಗುಲವಾಗಿದೆ ಎಂಬುದರ ಅರಿವು ಎಲ್ಲಾ ಸದಸ್ಯರಿಗೂ ಇದೆ. ಆದಕಾರಣ, ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಫೆಬ್ರವರಿ 10 ರಿಂದ ನಡೆಯಲಿರುವ ಜಂಟಿ ಅಧಿವೇಶನ ಹಾಗೂ ಫೆಬ್ರವರಿ 17 ರಿಂದ ನಡೆಯಲಿರುವ ಆಯವ್ಯಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದನದ ಘನತೆಯನ್ನು ಹೆಚ್ಚಿಸುವಂತೆ ಸದಸ್ಯರಲ್ಲಿ ವಿನಂತಿಸಿದರು.

ಅಧಿವೇಶನದ ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಕೆಲವು ರಾಜಕೀಯ ಪಕ್ಷಗಳು ಹಾಗೂ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಗಮನಿಸಿದರೆ ತಮ್ಮ ಕೆಲಸ ಸುಲಭವಾಗಲಿದೆ ಎನಿಸುತ್ತದೆ ಎಂದ ಅವರು ಅಧಿವೇಶನದ ಸಂದರ್ಭದಲ್ಲಿ ಸದಸ್ಯರ ಹಾಜರಾತಿ ಕುಸಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸೂಚ್ಯವಾಗಿ ತಿಳಿಸಿದರು.

ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಫೆ. 10 ರಂದು ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಚಳಿಗಾಲದ ಅಧಿವೇಶನದ ನಂತರ ಹಾಗೂ ಜಂಟಿ ಅಧಿವೇಶನದ ನಡುವೆ ಸ್ವರ್ಗಸ್ಥರಾದ ಗಣ್ಯಾತಿಗಣ್ಯರಿಗೆ ಸಂತಾಪ ಸೂಚನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಫೆಬ್ರವರಿ 13 ರಿಂದ ಸತತವಾಗಿ ನಾಲ್ಕು ದಿನಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯದ ಜೊತೆಗೆ ಎಂದಿನಂತೆ ಸದನದ ಕಾರ್ಯಕಲಾಪಗಳು ನಡೆಯುತ್ತವೆ.

ಅಂತೆಯೇ, ಫೆ.17 ರಂದು ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24 ನೇ ಸಾಲಿನ ಆಯವ್ಯಯವನ್ನು ಮಂಡಿಸುವುದರೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯ ಅಧಿವೇಶನ ಪ್ರಾರಂಭವಾಗಲಿದೆ. ಆಯವ್ಯಯ ಮಂಡನೆಗೆ ಸಂಬಂಧಿಸಿದಂತೆ ಫೆ.20 ರಿಂದ 24 ರ ವರೆಗೆ ಚರ್ಚೆ ನಡೆಯಲಿದೆ ಎಂದು ಪ್ರಕಟಿಸಿದ ಸಭಾಧ್ಯಕ್ಷರು 11 ದಿನಗಳ ಅಧಿವೇಶನದ ಅವಧಿಯಲ್ಲಿ 9 ದಿನಗಳು ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯಲ್ಲಿ ಚರ್ಚೆಯೂ ಒಳಗೊಂಡಂತೆ ಇತರೆ ಕಾರ್ಯಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಫೆಬ್ರವರಿ 13 ರಂದು ಸಭಾ ನಾಯಕರೂ ಆದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಹಾಗೂ ಸದನ ನಾಯಕರೊಂದಿಗೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಯಲಿದ್ದು, ಸದನದ ನಡೆಯನ್ನು ನಿರ್ಧರಿಸಲಿದೆ. ಇದೀಗ ಸದನದಲ್ಲಿ ಮಂಡನೆಗೆ ಏಳು ವಿಧೇಯಕಗಳು ಸ್ವೀಕೃತವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ಆರು ಖಾಸಗಿ ವಿಶ್ವವಿದ್ಯಾನಿಲಯಗಳ ವಿಧೇಯಕಗಳು ಒಳಗೊಂಡಿವೆ. ಅಲ್ಲದೇ, 1300 ಪ್ರಶ್ನೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿನ ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳ ಕಾರ್ಯಕಲಾಪಗಳನ್ನು ಮತ್ತಷ್ಟು ಉತ್ತಮೀಕರಿಸಲು ಪ್ರೋತ್ಸಾಹದಾಯಕವಾಗಿ ಅತ್ಯುತ್ತಮ ಸದನ ಪ್ರಶಸ್ತಿಯನ್ನು ಸ್ಥಾಪಿಸಲು ಲೋಕ ಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಅತ್ಯುತ್ತಮ ಸದನ ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳನ್ನು ರೂಪಿಸಿ ವರದಿಯನ್ನು ಸಲ್ಲಿಸಿದೆ. ಅಂತೆಯೇ, ಇದೇ ವರ್ಷದಲ್ಲಿಯೇ ಪ್ರಶಸ್ತಿಯನ್ನು ಪ್ರಕಟಿಸುವಂತೆ ಲೋಕ ಸಭಾ ಸದಸ್ಯರಲ್ಲಿ ವಿನಂತಿಸಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.

ತಮ್ಮ ಇತ್ತೀಚಿನ ದೆಹಲಿ ಭೇಟಿಯ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 10 ನೇ ಅನುಸೂಚಿ, ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತಂತೆ ಕರ್ನಾಟಕ ವಿಧಾನ ಸಭೆಯ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಚರ್ಚೆ, ಸಂವಾದ, ಕಮ್ಮಟ ಹಾಗೂ ಕಾರ್ಯಾಗಾರಗಳ ಕುರಿತು ರಾಷ್ಟ್ರಪತಿ ದ್ರೌಪತಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಾಗ ಉಭಯ ನಾಯಕರು ತೀವ್ರ ಆಸಕ್ತಿ ತೋರಿದರಲ್ಲದೇ ಕರ್ನಾಟಕ ವಿಧಾನ ಸಭೆಯ ಈ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಅಧಿಕಾರಿಗಳು ಹಾಜರಿದ್ದರು.


Spread the love