ಸದನದಲ್ಲಿ ಅತಿರೇಕದ ವರ್ತನೆ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 10 ಮಂದಿ ಬಿಜೆಪಿ ಶಾಸಕರ ಅಮಾನತು

Spread the love

ಸದನದಲ್ಲಿ ಅತಿರೇಕದ ವರ್ತನೆ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 10 ಮಂದಿ ಬಿಜೆಪಿ ಶಾಸಕರ ಅಮಾನತು

ಬೆಂಗಳೂರು: ವಿಧಾನಸಭೆ ಕಲಾಪದ ಸಂದರ್ಭ ಅತಿರೇಕದ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ.

ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಲಾಗಿದೆ. ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅಮಾನತಾಗಿರುವ ಬಿಜೆಪಿ ಶಾಸಕರಾಗಿದ್ದಾರೆ.

ಗುರುವಾರ ಮತ್ತು ಶುಕ್ರವಾರ 2 ದಿನಗಳ ಕಾಲ ಅಧಿವೇಶನ ಬಾಕಿ ಉಳಿದಿದೆ. ಸದನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಅಮಾನತು ಮಾಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ. ನಂತರ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿದೆ.

ನಂತರ ಅಮಾನತುಗೊಂಡವರನ್ನು ಸದನದಿಂದ ಹೊರಕಳಿಸಲು ಮಾರ್ಷಲ್ಸ್‌ ಒಳಬಂದರು. ಅಷ್ಟರಲ್ಲಿ ಬಿಜೆಪಿಯ ಇತರ ಶಾಸಕರು ಅಮಾನತುಗೊಂಡ ಶಾಸಕರಿಗೆ ತಡೆಗೋಡೆಯಾಗಿ ನಿಂತರು. ಅಮಾನತುಗೊಂಡ ಶಾಸಕರನ್ನು ಮಾರ್ಷಲ್​​ಗಳು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿಯ ಇತರ ಶಾಸಕರು ಪ್ರಯತ್ನಿಸಿದರು.

ಇದಕ್ಕೂ ಮುನ್ನ ಬಿಜೆಪಿ ಶಾಸಕರು ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್​ಗೆ ದೂರು ನೀಡಿದ್ದರು. ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ ಆಗ್ರಹಿಸಿದ್ದರು.


Spread the love