ಸದನದಲ್ಲಿ ಮೀನುಗಾರರ ಧ್ವನಿಯಾಗಿ  ಅವರಿಗೆ ನ್ಯಾಯ ಕೊಡಿಸುತ್ತೇನೆ -ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

Spread the love

ಸದನದಲ್ಲಿ ಮೀನುಗಾರರ ಧ್ವನಿಯಾಗಿ  ಅವರಿಗೆ ನ್ಯಾಯ ಕೊಡಿಸುತ್ತೇನೆ -ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಉಡುಪಿ: ಮೀನುಗಾರರ ಧ್ವನಿಯಾಗಿ ಸದನದಲ್ಲಿ ಬೆಲೆ ಕೊಡಿಸುತ್ತೇನೆ ಮೀನುಗಾರರ ಸಮಸ್ಯೆಗಳನ್ನು ಪರಿಹರಿಸವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳೀದರು.

ಅವರು ಮಲ್ಪೆಯಲ್ಲಿ ಮಂಗಳವಾರ ಮೀನುಗಾರ ಮುಖಂಡರೊಂದಿಗೆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಮಾತನಾಡಿದರು.

ಮೀನುಗಾರರ ಧ್ವನಿಯಾಗಬೇಕೆಂಬ ಉದ್ದೇಶದಿಂದ ನಾನು ಮೀನುಗಾರರ ಬಳಿಗೆ ಬಂದಿದ್ದೇನೆ ಹೊರತು ಚುನಾವಣಾ ಉದ್ದೇಶದಿಂದ ಬಂದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಖಂಡಿತ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಆಗ ಮೀನುಗಾರರಿಗೆ ಸರ್ಕಾರವೇ ಗ್ಯಾರಂಟಿ ನಿಂತು ಸಾಲ ನೀಡಲಿದೆ ಎಂದು ಹೇಳಿದರು.

ಕೇರಳ, ಗೋವಾದಲ್ಲಿರುವಂತೆ ಕರ್ನಾಟಕದಲ್ಲೂ ಕರಾವಳಿಯ ತೀರದಲ್ಲಿ ಬದುಕುತ್ತಿರುವ ಮೀನುಗಾರರಿಗೆ ಅನ್ಯಾಯವಾಗ ಬಾರದು. ಆಂಧ್ರದಲ್ಲಿ ದೊರೆಯುವಂತೆ ಡೀಸೆಲ್ ಸಬ್ಸಿಡಿ ಕರ್ನಾಟಕದ ಮೀನುಗಾರರಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮೀನುಗಾರರ ಧ್ವನಿಯಾಗಲಿದೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಮೀನುಗಾರರಿದ್ದರೂ ಕೇವಲ ಕೆಲವೇ ಮಂದಿಗೆ 3 ಸಾವಿರ ರೂ ಪರಿಹಾರ ನೀಡುವ ತೀರ್ಮಾನದಿಂದ ಮೀನುಗಾರರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಪಡಿಸಲು ಸರಕಾರದ ಗಮನ ಸೆಳೆಯುವುದಾಗಿ ಶಿವಕುಮಾರ್‌ ಹೇಳಿದರು.

ಕಟ್ಟಡ ಕಾರ್ಮಿಕರು ಮಾತ್ರವಲ್ಲ ಮೀನುಗಾರರು ಅಸಂಘಟಿತ ಕಾರ್ಮಿಕರು. ಹಾಗಾಗಿ ಎಲ್ಲಾ ಮೀನುಗಾರರು ಅಸಂಘಟಿತ ಕಾರ್ಮಿಕರ ಪರಿಹಾರ ನಿಧಿಗೆ ಅರ್ಜಿ ಹಾಕಿ ಖಂಡಿತ ನಿಮಗೆ ಪರಿಹಾರ ದೊರಕಲಿದೆ. ಬೀದಿ ಬದಿಯಲ್ಲಿ ಮೀನು ವ್ಯಾಪಾರ ಮಾಡುವವರು, ಬಂದರು ಕಾರ್ಮಿಕರು ಎಲ್ಲರೂ ಅಸಂಘಟಿತ ಕಾರ್ಮಿಕರೆ, ಮೊದಲಾಗಿ ಎಲ್ಲರೂ ರಿಜಿಸ್ಟ್ರೇಷನ್ ಮಾಡುವ ಕಾರ್ಯ ಮಾಡಬೇಕು. ನಾವೆಲ್ಲ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂಬ ಭರವಸೆ ನೀಡಿದರು.

ಸಂಸದ ಡಿ ಕೆ ಸುರೇಶ್‌ ಪ್ರೇರಣೆ
ಈ ವೇಳೆ ಮಾತನಾಡಿದ ಮೀನುಗಾರ ಮುಖಂಡ ರಮೇಶ್‌ ಕುಂದರ್‌ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್‌ ಅವರ ಸಹೋದರ ಸಂಸದ ಡಿ ಕೆ ಸುರೇಶ್‌ ಅವರು ಕುಂದಾಪುರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಬಂದಾಗ ಬೀಚ್‌ ನಲ್ಲಿ ಮೀನುಗಾರರನ್ನು ಮಾತನಾಡಿಸಿ ಅವರ ಕಷ್ಟವನ್ನು ಕೇಳಿದ್ದರು. ಅಲ್ಲದೆ ಒಂದು ಬೋಟ್‌ ಅಣಿಗೊಳಿಸಿ ಒಂದು ದಿನ ಮೀನುಗಾರರೊಂದಿಗೆ ಮೀನುಗಾರಿಕೆ ನಡೆಸುವ ಇಚ್ಚೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಿಲ್ಲವ ನಾಯಕರು ಹಾಗೂ ಕಾಂಗ್ರೆಸ್‌ ಮುಖಂಡರಾದ ಅಶೋಕ್‌ ಪೂಜಾರಿ ಬೀಜಾಡಿ ಅವರ ನೇತೃತ್ವದಲ್ಲಿ ಬೋಟ್‌ ನಲ್ಲಿ ತೆರಳಿ ಮೀನುಗಾರರೊಂದಿಗೆ ಮೀನು ಹಿಡಿಯಲು ಬಂದಿದ್ದರು. ಅಂದು ಇಡೀ ದಿನ ಮೀನುಗಾರಿಕೆ ಮಾಡಿದಾಗ ಏನೂ ಮೀನು ಲಭಿಸದೆ ಇರುವುದನ್ನು ಕಂಡು ಮೀನುಗಾರರ ನೈಜ ಬದುಕು ಬವಣೆಯನ್ನು ಅರ್ಥಮಾಡಿಕೊಂಡು ತನ್ನ ಸಹೋದರ ಡಿ ಕೆ ಶಿವಕುಮಾರ್‌ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಅದರಂತೆ ಇತ್ತೀಚೆಗೆ ಕೆಲವೊಂದು ಮುಖಂಡರನ್ನು ಬೆಂಗಳೂರಿಗೆ ಕರೆಸಿ ಮೀನುಗಾರರ ಸಮಸ್ಯೆಯನ್ನು ಶಿವಕುಮಾರ್‌ ಆಲಿಸಿದ್ದರು. ಬಳಿಕ ಎರಡು ದಿನಗಳ ಹಿಂದೆ ಕರಾವಳಿಗೆ ಸ್ವತಃ ಆಗಮಿಸಿ ಮೀನುಗಾರರೊಂದಿಗೆ ಸಂವಾದವನ್ನು ಏರ್ಪಡಿಸುವ ಇಚ್ಛೆ ಶಿವಕುಮಾರ್‌ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಮೀನುಗಾರ ಮುಖಂಡರು ತಮ್ಮ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಕಾರ್ಯಧ್ಯಕ್ಷ ಧ್ರುವನಾರಾಯಣ್‌, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಂಕಾಳ್‌ ವೈದ್ಯ, ಐವನ್‌ ಡಿಸೋಜಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.


Spread the love