ಸದಸ್ಯರ ಸತತ ಗೈರಿಗೆ ಭುಗಿಲೆದ್ದ ಆಕ್ರೋಶ: ಜನಾಭಿಪ್ರಾಯದ ಮೇರೆಗೆ ಕಟ್‍ಬೇಲ್ತೂರು ಗ್ರಾಮಸಭೆ ಮುಂದೂಡಿಕೆ

Spread the love

ಸದಸ್ಯರ ಸತತ ಗೈರಿಗೆ ಭುಗಿಲೆದ್ದ ಆಕ್ರೋಶ: ಜನಾಭಿಪ್ರಾಯದ ಮೇರೆಗೆ ಕಟ್‍ಬೇಲ್ತೂರು ಗ್ರಾಮಸಭೆ ಮುಂದೂಡಿಕೆ

  • ಹರೆಗೋಡು ಒಂದನೇ ವಾರ್ಡ್‍ನ ಇಬ್ಬರು ಸದಸ್ಯರ ಗೈರು. ಸಭೆ ಮುಂದೂಡಲು ಗ್ರಾಮಸ್ಥರ ಆಗ್ರಹ. ಜನವರಿ 19ಕ್ಕೆ ಗ್ರಾಮಸಭೆ ಮುಂದೂಡಿ ಘೋಷಣೆ.

 
ಕುಂದಾಪುರ: ಸದಸ್ಯರ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾಮಸಭೆಯನ್ನು ನಡೆಸಲಾಗುತ್ತದೆ. ಆದರೆ ಸದಸ್ಯರೇ ಗೈರು ಹಾಜರಾದರೆ ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು. ಒಂದನೇ ವಾರ್ಡ್‍ನ ಇಬ್ಬರು ಸದಸ್ಯರಿಲ್ಲದೇ ಈ ಸಭೆಯನ್ನು ಮುಂದುವರೆಸಲು ಸಾಧ್ಯವೇ ಇಲ್ಲ. ಹೀಗಾಗಿ ಗ್ರಾಮಸಭೆಯನ್ನು ಮುಂದೂಡಬೇಕು ಎಂದು ಗ್ರಾಮಸ್ಥರ ಆಗ್ರಹಕ್ಕೆ ಬಹುಮತದ ಜನಾಭಿಪ್ರಾಯದ ಆಧಾರದ ಮೇಲೆ ಕಟ್‍ಬೇಲ್ತೂರು ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಮುಂದೂಡಿದ ಘಟನೆ ಶುಕ್ರವಾರ ನಡೆದಿದೆ.

ಇಲ್ಲಿನ ಭದ್ರಮಹಾಕಾಳಿ ಸಭಾಭವನದಲ್ಲಿ ಜರುಗಿದ ಕಟ್‍ಬೇಲ್ತೂರು ಗ್ರಾಮ ಪಂಚಾಯತ್‍ನ 2021-2022ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಗೆ ಹರೆಗೋಡು ಒಂದನೇ ವಾರ್ಡ್ ಸದಸ್ಯರಾದ ರಾಮ ಶೆಟ್ಟಿ ಹಾಗೂ ವಿಮಲಾ ಗೈರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆ ಮುಂದೂಡಲು ಆಗ್ರಹಿಸಿದರು. ಬಹುಮತದ ಆಧಾರದಲ್ಲಿ ಸಭೆ ಮುಂದೂಡಿ, ಕಟ್‍ಬೇಲ್ತೂರು ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಜನವರಿ 19 ರಂದು ಬೆಳಿಗ್ಗೆ ಭದ್ರಮಹಾಕಾಳಿ ಸಭಾಭವನದಲ್ಲಿ ನಡೆಸಲಾಗುವುದು. ಸಭೆಗೆ ಗೈರಾದ ಸದಸ್ಯರಿಗೆ ಮುಂದಿನ ಸಭೆಗೆ ಕಡ್ಡಾಯವಾಗಿ ಭಾಗವಹಿಸುವಂತೆ ನೋಟೀಸ್ ನೀಡಲಾಗುವುದು ಎಂದು ಅಧ್ಯಕ್ಷರ ಒಪ್ಪಿಗೆಯ ಮೇರೆಗೆ ಹಿರಿಯ ಸದಸ್ಯ ಅಶೋಕ್ ಬಳೆಗಾರ್ ಘೋಷಿಸಿದರು.

ಸಭೆ ಆರಂಭಿಸುತ್ತಿದ್ದಂತೆಯೇ ಹರೆಗೋಡು ಒಂದನೇ ವಾರ್ಡ್ ನಿವಾಸಿ ಸುಕುಮಾರ್ ಹರೆಗೋಡು ವಿಷಯ ಪ್ರಸ್ತಾಪಿಸಿ, ಪ್ರತೀ ಗ್ರಾಮಸಭೆಗೂ ಒಂದನೇ ವಾರ್ಡ್ ಸದಸ್ಯ ರಾಮ ಶೆಟ್ಟಿ ಗೈರಾಗುತ್ತಿದ್ದಾರೆ. ವಾರ್ಡ್ ಸಭೆಗಳಿಗೂ ಬಂದು ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಒಂದನೇ ವಾರ್ಡ್‍ನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗಾಗಿಯೇ ಗ್ರಾಮಸಭೆ ನಡೆಸುವುದು. ಆದರೆ ನಮ್ಮ ವಾರ್ಡ್ ಸದಸ್ಯರಿಲ್ಲದೇ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದರು.

ಗ್ರಾಮಸ್ಥ ಸಂಜು ಬಗ್ವಾಡಿ, ಶೇಖರ್ ಬಳೆಗಾರ ಮಾತನಾಡಿ, ಉದ್ಯೋಗ ಖಾತ್ರಿ ಮಹಿಳೆಯರು ಕೆಲಸಕ್ಕೆ ತೆರಳಿದರೆ, ಇನ್ಯಾರದ್ದೋ ಬಡವರ ಮನೆಗೆ ವಿದ್ಯುತ್ ಸಂಪರ್ಕ ನೀಡಿದಾಗ ಆಕ್ಷೇಪವೆತ್ತುವ ಸದಸ್ಯ ರಾಮ ಶೆಟ್ಟಿ ಗ್ರಾಮ ಸಭೆಗೆ ಯಾಕೆ ಬರುತ್ತಿಲ್ಲ. ಗ್ರಾಮಸಭೆಗೆ ಬಂದು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾದಗಿದ್ದರೆ ಅವರು ಸದಸ್ಯರಾಗಿ ಯಾಕೆ ಉಳಿದುಕೊಳ್ಳಬೇಕು. ಶಾಲೆಯಲ್ಲಿಯೇ ಶಿಕ್ಷಕರಾಗಿ ಉಳಿದುಕೊಳ್ಳಲಿ. ನಮ್ಮ ಬಳಿ ಸಾಕಷ್ಟು ಪ್ರಶ್ನೆಗಳಿವೆ. ಅವರಿಂದಲೇ ನಾವು ಉತ್ತರವನ್ನು ಪಡೆದುಕೊಳ್ಳಬೇಕು. ಪಂಚಾಯತ್‍ರಾಜ್ ಕಾಯ್ದೆಯಲ್ಲಿ ಮನೆ, ನೀರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶಗಳಿಲ್ಲವಾ? ಸತತವಾಗಿ ಸಭೆಗೆ ಗೈರಾಗುತ್ತಿರುವ ಸದಸ್ಯ ರಾಮ ಶೆಟ್ಟಿಯವರ ಮೇಲೆ ನೋಟೀಸ್ ಜಾರಿಗೊಳಿಸಿ ಸಭೆಗೆ ಕಡ್ಡಾಯವಾಗಿ ಬರುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಸಭೆ ಮುಂದೂಡಿದ ಬಳಿಕ ಗೌಜು-ಗದ್ದಲ!
ಜನಾಭಿಪ್ರಾಯದ ಮೇರೆಗೆ ಸಭೆ ಮುಂದೂಡಿ ಮುಂದಿನ ದಿನಾಂಕ ಘೋಷಣೆ ಮಾಡಿದ ಬಳಿಕ ಸದಸ್ಯರು ಹಾಗೂ ಉಳಿದ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಗ್ರಾಮಸ್ಥ ಸತೀಶ್ ಜೋಗಿ ಮಾತನಾಡಿ, ಒಂದು ವಾರ್ಡ್‍ನ ಇಬ್ಬರು ಸದಸ್ಯರು ಗೈರಾದ ಕಾರಣಕ್ಕೆ ಇಡೀ ಸಭೆಯನ್ನು ಮುಂದೂಡುವುದು ಸರಿಯಲ್ಲ. ನಮಗೂ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಬೇಕು. ಸಭೆ ಇದ್ದಕ್ಕಿಂತೆಯೇ ಮುಂದೂಡಿದರೆ ಸಭೆಗೆ ಬಂದ ನಮಗೆಲ್ಲರಿಗೂ ಅನ್ಯಾಯವಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಾಗರಾಜ್ ಪತ್ರನ್, ಹಿರಿಯ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ಸಭೆ ಮುಂದೂಡುವ ಅಭಿಪ್ರಾಯ ಗ್ರಾಮಸ್ಥರೇ ನೀಡಿದ್ದು. ಬಹುಮತದ ಆಧಾರದಲ್ಲಿ ಸಭೆಯನ್ನು ಮುಂದೂಡಿ ಮುಂದಿನ ದಿನಾಂಕವನ್ನು ಘೋಷಿಸಿದ್ದೇವೆ. ಮುಂದಿನ ಸಭೆಗೂ ಅವರು ಗೈರಾದರೆ ಸಭೆ ನಿಲ್ಲಿಸಲು ಅವಕಾಶವಿರುವುದಿಲ್ಲ. ಮುಂದಿನ ದಿನಾಂಕಕ್ಕೆ ಸಭೆ ನಡೆಯುತ್ತದೆ ಎಂದರು.

 ಸಭೆ ಮುಗಿದ ಬಳಿಕ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣ: ದೂರು ದಾಖಲು
ಗ್ರಾಮದ ಮತದಾರರಲ್ಲದ ಮಹೇಶ್ ಖಾರ್ವಿ ಎಂಬವರು ಮಧ್ಯ ಪ್ರವೇಶಿಸಿ ಹಿರಿಯ ಸದಸ್ಯ ಅಶೋಕ್ ಬಳೆಗಾರ್ ವಿರುದ್ದ ಹರಿಹಾಯ್ದು, ತಮಗಿಷ್ಟ ಬಂದಂತೆ ಸಭೆ ನಿಲ್ಲಿಸುವುದು ಸರಿಯಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಅಶೋಕ್ ಬಳೆಗಾರ್ ನೀವು ಗ್ರಾಮಸ್ಥರಲ್ಲ. ನಿಮಗೆ ಸಭೆಯಲ್ಲಿ ಮಾತನಾಡುವ ಹಕ್ಕು ಇಲ್ಲ ಎಂದರು. ಸದಸ್ಯರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮಹೇಶ್ ಮತ್ತೆ ಸದಸ್ಯರ ಮೇಲೆ ವಾಗ್ದಾಳಿ ನಡೆಸಲು ಮುಂದಾಗಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಯಿತು. ಕೂಡಲೇ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮಸಭೆಗೆ ಬಂದು ಸದಸ್ಯರ ವಿರುದ್ದ ಅನುಚಿತವಾಗಿ ವರ್ತನೆ ತೋರಿದ ಮಹೇಶ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ್ ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಮಾರ್ಗದರ್ಶಿ ಆಧಿಕಾರಿಯಾಗಿ ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಬೇಬಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ನಾಗರಾಜ್ ಎಸ್ ಪುತ್ರನ್, ಉಪಾಧ್ಯಕ್ಷೆ ಶ್ವೇತಾ ದೇವಾಡಿಗ, ಅಶೋಕ್ ಬಳೆಗಾರ್, ಶರತ್ ಕುಂಆರ್ ಶೆಟ್ಟಿ ಬಾಳೆಕೆರೆ, ಸಚ್ಚೀಂದ್ರ ದೇವಾಡಿ, ಗಣೇಶ್ ಶೆಟ್ಟಿ, ಜ್ಯೋತಿ, ಸವಿತಾ, ಶಾಲಿನಿ, ವೈಶಾಲಿ, ಸುಮತಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಮಂಜುನಾಥ ಇದ್ದರು.


Spread the love

Leave a Reply