ಸಮಯಕ್ಕೆ ಸರಿಯಾಗಿ ಬಾರದ ಬಸ್‍ ಗಳು: ಶಾಲಾ ಮಕ್ಕಳ ಪರದಾಟ

Spread the love

ಸಮಯಕ್ಕೆ ಸರಿಯಾಗಿ ಬಾರದ ಬಸ್‍ ಗಳು: ಶಾಲಾ ಮಕ್ಕಳ ಪರದಾಟ

ಸರಗೂರು: ಕೆಎಸ್ ಆರ್‍ ಟಿಸಿ ಬಸ್ ನ್ನು ನಂಬಿ ಶಾಲೆಗೆ ತೆರಳುವ ಗ್ರಾಮೀಣ ಮಕ್ಕಳು ಸಮಯಕ್ಕೆ ಸರಿಯಾಗಿ ಬಾರದ ಬಸ್ ನಿಂದ ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮೀಣ ಭಾಗದ ಬಹುತೇಕ ಮಕ್ಕಳು ದೂರದ ಶಾಲೆಗಳಿಗೆ ಬಸ್ ನಲ್ಲಿಯೇ ತೆರಳಬೇಕಾಗಿದೆ. ಆದರೆ ಬಹಳಷ್ಟು ಕಡೆಗಳಿಗೆ ಬಸ್ ಗಳಿದ್ದರೂ ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದೆ ಇರುವುದರಿಂದ ಶಾಲೆಗೆ ತೆರಳಲಾಗದೆ ಪರದಾಡುವಂತಾಗಿದೆ. ಕೆಲವು ಕಡೆಗಳಲ್ಲಿ ಮಕ್ಕಳಿಗೆ ಬಸ್ ಸಿಗದ ಕಾರಣದಿಂದ ನಾಲ್ಕಾರು ಕಿ.ಮೀ.ನಷ್ಟು ದೂರದ ಶಾಲೆಗಳಿಗೆ ನಡೆದುಕೊಂಡೇ ಹೋಗುವಂತಾಗಿದೆ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಜನರು ತೀರಾ ಬಡತನದಲ್ಲಿದ್ದು, ಆದರೂ ಕಷ್ಟಪಟ್ಟು ದುಡಿದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಶಾಲೆಗೆ ಹೋಗಲು ಮಕ್ಕಳು ಬಸ್ಸನ್ನೇ ನಂಬಿದ್ದು, ಈ ಬಸ್ ಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಆ ದಿನ ಮಕ್ಕಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೆಲವು ಮಕ್ಕಳು ಬಸ್ಸಿನ ಸಹವಾಸವೇ ಬೇಡವೆಂದೂ ನಡೆದುಕೊಂಡೇ ಹೋಗುತ್ತಿರುವುದು ಕಂಡು ಬಂದಿದೆ.

ತಾಲೂಕಿನ ಹಲಸೂರು ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈ ಗ್ರಾಮದಿಂದ ಬಸ್ ಬರುವ ಸ್ಥಳಕ್ಕೆ ಎರಡು ಕಿಲೋಮೀಟರ್ ದೂರವಿದೆ. ಅಷ್ಟು ದೂರ ನಡೆದು ಹೋದರೂ ಅಲ್ಲಿಗೆ ಯಾವ ಬಸ್ಸುಗಳು ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಇದರಿಂದ ನಾವುಗಳು ನಡೆದುಕೊಂಡು ಹೋಗಿ ಬಸ್ಸನ್ನು ಹತ್ತಬೇಕು, ಅಲ್ಲಿಗೆ ಹೋದರೂ ಕೂಡ ಮೊದಲೇ ಭರ್ತಿಯಾಗಿ ಬರುವ ಬಸ್ ಗಳು ನಿಲ್ಲಿಸದೆ ಹೋಗುತ್ತಿದ್ದು ಇದರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಮತ್ತು ಸಂಜೆ ಶಾಲಾ ಸಮಯಕ್ಕೆ ಹೊಂದಿಕೊಳ್ಳುವಂತೆ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಕಷ್ಟ ಸಂಬಂಧಿಸಿದವರಿಗೆ ಅರ್ಥವಾಗದ ಕಾರಣದಿಂದಾಗಿ ವಿದ್ಯಾರ್ಥಿಗಳ ಪರದಾಟ ಮುಂದುವರೆದಿದೆ.


Spread the love