ಸಮಯವಕಾಶ ನೀಡದೆ ಆರಂಭದಲ್ಲೇ ಟೀಕೆ ಸಲ್ಲದು – ಜಯಪ್ರಕಾಶ್ ಹೆಗ್ಡೆ

Spread the love

ಸಮಯವಕಾಶ ನೀಡದೆ ಆರಂಭದಲ್ಲೇ ಟೀಕೆ ಸಲ್ಲದು – ಜಯಪ್ರಕಾಶ್ ಹೆಗ್ಡೆ

ಉಡುಪಿ: ಸರಕಾರದ ಒಳ್ಳೆಯ ಯೋಜನೆಗಳ ಕುರಿತು ಆರಂಭದಲ್ಲೇ ಟೀಕೆ ಮಾಡುವ ಬದಲು ಅದನ್ನು ಸರಿಯಾಗಿ ಜಾರಿ ಮಾಡಲು ಸರಕಾರಕ್ಕೂ ಸ್ವಲ್ಪ ಕಾಲಾವಕಾಶ ನೀಡಬೇಕು ಎನ್ನುವ ಮೂಲಕ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯ ನಡೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯಾಗಿರುವ “ಶಕ್ತಿ” ಯೋಜನೆಗೆ ನಗರದ ಬನ್ನಂಜೆ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂಬ ಟೀಕೆಗಳು ಆರಂಭವಾಗಿದೆ ಆದರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ನಷ್ಟ ಆಗುತ್ತಿರುವ ಸಮಯದಲ್ಲಿ ಇಂತಹ ಒಳ್ಳೆಯ ಕಾರ್ಯಕ್ರಮದಿಂದ ಜನರಿಗೆ ಉಪಯೋಗವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೆ ಏನೂ ದೊಡ್ಡ ವಿಷಯವಾಗುವುದಿಲ್ಲ. ಶಕ್ತಿ ಕಾರ್ಯಕ್ರಮದಿಂದ ಮಹಿಳೆಯರ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಅಲ್ಲದೆ ಮಹಿಳೆಯರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಿದ್ದರಿಂದ ಆ ಭಾಗದಲ್ಲಿವ್ಯಾಪಾರ ವಹಿವಾಟಿಗೂ ದಾರಿ ಮಾಡಿಕೊಟ್ಟಂತಾಗುತ್ತದೆ. ಸರಕಾರ ಒಳ್ಳೆಯ ಯೋಜನೆಯನ್ನು ಜನರಿಗೆ ನೀಡಿದೆ ಅದನ್ನು ಟೀಕಿಸುವ ಬದಲು ಬೆಂಬಲಿಸಬೇಕು. ತಪ್ಪಾದರೆ ಅದನ್ನು ಪ್ರಶ್ನೆ ಮಾಡಬೇಕೇ ವಿನಃ ಆರಂಭದಲ್ಲೇ ಅದರ ಬಗ್ಗೆ ಟೀಕೆ ಸಲ್ಲದು. ಮೊದಲ ಯೋಜನೆ ಜಾರಿಯಾದಂತೆ ಇನ್ನುಳಿದ ಯೋಜನೆಗಳೂ ಆದಷ್ಟು ಬೇಗ ಜಾರಿಯಾಗಲಿ ಎಂದು ಅವರು ಶುಭ ಹಾರೈಸಿದರು.


Spread the love