ಸಮಸಮಾಜ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ: ಸಿಎಂ ಬೊಮ್ಮಾಯಿ

Spread the love

ಸಮಸಮಾಜ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ: ಸಿಎಂ ಬೊಮ್ಮಾಯಿ

ಮೈಸೂರು: ಬಸವಣ್ಣನ ವಿಚಾರದ ಸಮಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ತೊಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ರಜತ ಮಹೋತ್ಸವದ ಅಂಗವಾಗಿ ಎರಡು ದಿನಗಳವರೆಗೆ ಆಯೋಜಿಸಿರುವ ಬೆಳ್ಳಿ ಬೆಳಗು ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣರು ಅಸಮಾನತೆ, ಮೂಢನಂಬಿಕೆ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ್ದರು. ಆದರೆ, ಆ ಪದ್ಧತಿಗಳು ಇಂದಿಗೂ ಇವೆ. ಈ ಪರಿಸ್ಥಿತಿ ಬಂದಿರುವುದೇಕೆ ಎಂಬ ಬಗ್ಗೆ ಬಸವ ಭಕ್ತರಾದವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಮ ಸಮಾಜದ ನಿರ್ಮಾಣ ಬಯಸಿದ್ದ ಬಸವಣ್ಣನ ವಿಚಾರ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಸಮಾನತೆ ಇಂದಿಗೂ ಇದೆ. ಈಗಲೂ ಎಲ್ಲರಿಗೂ ಸಮಾನತೆ ತಂದುಕೊಡಲಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಸಂಪತ್ತಿನ ಹಂಚಿಕೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗದಿದ್ದರೆ ಸಮಗ್ರ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು.

ಒಳ್ಳೆಯ ಕೆಲಸ ಮಾಡುವುದರಿಂದ ನಿಜವಾದ ಶ್ರೀಮಂತಿಕೆ ಬರುತ್ತದೆ. ಬಸವಾದಿ ಶರಣರು, ಮೈಸೂರು ಅರಸರು ಸತ್ಕಾರ್ಯ ಮಾಡಿದ್ದರಿಂದಲೇ ಎಲ್ಲರೂ ಈಗಲೂ ನೆನೆಯುತ್ತಿದ್ದಾರೆ. ಅಂಥವರೇ ನಿಜವಾದ ಶ್ರೀಮಂತರು. ನಾವೆಲ್ಲರೂ ಬಸವಪಥದಲ್ಲಿ ನಡೆದರೆ ಬದುಕನ್ನು ಹಸನುಗೊಳಿಸಿಕೊಳ್ಳಬಹುದು. ವಚನಗಳ ಸಾರವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಎಲ್ಲರೂ ನಮ್ಮವರೆಂಬ ಭಾವನೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಗಳಿಸಿದ್ದರಲ್ಲಿ ಹಂಚಿಕೊಂಡು ಜೀವನ ನಡೆಸಿದರೆ ಬಸವಣ್ಣ ಬಯಸಿದ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹಿಂದಿನಂತೆ ಬಸವಣ್ಣನನ್ನು ಪರಿಚಯಿಸಬೇಕಾದ ಅಗತ್ಯವಿಲ್ಲ. ಈಗ ಮನೆಮಾತಾಗಿದ್ದಾರೆ. ಅವರ ವಚನಗಳು ಮನೆಗಳನ್ನು ತಲುಪುತ್ತಿವೆ ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಇದ್ದರು.


Spread the love