
ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಕಾಂಗ್ರೆಸ್ ಬೆಂಬಲಿಸಿ – ಪ್ರಸಾದ್ ರಾಜ್ ಕಾಂಚನ್
ಉಡುಪಿ: ಉಡುಪಿಯಲ್ಲಿ ಪರಿಸರ ಸ್ನೇಹಿ ಉದ್ಯಮಗಳನ್ನು ಸ್ಥಾಪಿಸಿ ಯುವ ಜನತೆಗೆ ಇಲ್ಲೇ ಉದ್ಯೋಗ ದೊರಕಿಸಿಕೊಟ್ಟರೆ ಹೆತ್ತವರೂ ಬಹಳ ಸಂತೋಷದಿಂದ ಮಕ್ಕಳ ಜತೆಗೇನೆ ಬದುಕುತ್ತಾರೆ, ಈ ನಿಟ್ಟಿನಲ್ಲಿ ತಾನು ಶಾಸಕನಾದ ಬಳಿಕ ತೀವ್ರವಾಗಿ ಪ್ರಯತ್ನ ಮಾಡುವೆನು. ಉದ್ಯಮಗಳು ಬರಬೇಕಾದರೆ ಸುಸಜ್ಜಿತ ಮೂಲಭೂತ ಸೌಕರ್ಯಗಳೂ ಇರಬೇಕು ಅದಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆಯೂ ನೆಲೆಸಿರಬೇಕು, ಇವೆಲ್ಲವೂ ಸಾಧ್ಯ ಆಗಬೇಕಾದರೆ ಉಡುಪಿಯ ಜನ ತನಗೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಉಡುಪಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಕುಡಿಯವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ಸಮಸ್ಯೆ ಉಡುಪಿ ನಗರದಲ್ಲಿ ಮತದಾರರು ಎತ್ತುತ್ತಿದ್ದ ಸಮಸ್ಯೆ ಆಗಿದ್ದು ಇವುಗಳಿಗೆ ಒಂದು ವೈಜ್ಞಾನಿಕ ಪರಿಹಾರವನ್ನೂ ಹುಡುಕಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರು ಮಾತನಾಡಿ, ಬಿಜೆಪಿಯ ಮುಖಂಡರುಗಳಾದ ಶೋಭಾ ಹಿಂದೆ ಗ್ಯಾಸ್ ಸಿಲಿಂಡರ್ಗೆ ಹತ್ತು ರೂ. ಜಾಸ್ತಿ ಮಾಡಿದಾಗಲೆಲ್ಲಾ ಬೀದಿಗಿಳಿದು ಸರಕಾರಕ್ಕೆ ಹಿಗ್ಗಾ ಮುಗ್ಗಾ ನಿಂದಿಸುತ್ತಿದ್ದರು, ಈಗ ಶೋಭಕ್ಕ ಕ್ಷೇತ್ರದಿಂದಲೇ ಕಣ್ಮರೆ ಆಗಿದ್ದಾರೆ, ಉಡುಪಿಯ ಎಲ್ಲಾ ಸರಕಾರಿ ಕಛೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಇನ್ನೊಮ್ಮೆ ಬಿಜೆಪಿ ಬಂದರೆ ದೇವರೇ ಬಂದರೂ ಪರಿಸ್ಥಿತಿ ಸರಿ ಪಡಿಸಲು ಸಾಧ್ಯವೇ ಇಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.
ಮುಖಂಡರುಗಳಾದ ಮಹಾಬಲ ಕುಂದರ್, ದಿವಾಕರ ಕುಂದರ್, ಗಣೇಶ್ ನೆರ್ಗಿ, ಸುಕೇಶ್ ಕುಂದರ್, ಕೀರ್ತಿ ಶೆಟ್ಟಿ, ಪ್ರಶಾಂತ ಪೂಜಾರಿ, ಮಿಥುನ್ ಅಮೀನ್, ಯತೀಶ್ ಕರ್ಕೆರ, ನಾಸೀರ್, ರವಿರಾಜ್, ಹಮ್ಮದ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಶರತ್ ಶೆಟ್ಟಿ, ಶಬರೀಶ್, ಮಮತಾ ಶೆಟ್ಟಿ, ವಿಶ್ವಾಸ್ ಅಮೀನ್, ಶ್ರೀನಿವಾಸ ಹೆಬ್ಟಾರ್, ಹಬೀಬ್ ಅಲಿ, ನಾಗೇಶ್ ಉದ್ಯಾವರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.