ಸಮಾಜದ ಶುದ್ಧೀಕರಣ ಕವಿಗಳಿಂದ ಸಾಧ್ಯ

Spread the love

ಸಮಾಜದ ಶುದ್ಧೀಕರಣ ಕವಿಗಳಿಂದ ಸಾಧ್ಯ

ಮೈಸೂರು: ಸಮಾಜದ ಶುದ್ಧೀಕರಣಕ್ಕೆ ಕವಿಗಳೇ ರೂವಾರಿಗಳಾಗಬೇಕು. ಸಾಂಪ್ರದಾಯಿಕ ಮಾದರಿಯ ಕವಿತೆಗಳನ್ನು ಬಿಟ್ಟು ಸಮಾಜಕ್ಕೆ ಅಗತ್ಯವಾದ ಕವಿತೆ ಬರೆಯುವ ತುರ್ತಿದೆ ಎಂದು ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ನಾಡಹಬ್ಬ ಮೈಸೂರು ದಸರಾ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಚ್ಛತಾ ಆಂದೋಲನದ ಮೂಲಕ ಬೀದಿ ಬೀದಿಯಲ್ಲಿ ಕಸ ಗುಡಿಸುತ್ತಿದ್ದೇವೆ. ಮನಸ್ಸಿನ ಶುದ್ಧೀಕರಣ ಆಗಬೇಕು. ಸಮಾಜದ ರೋಗಗ್ರಸ್ತ ಅಂಶಗಳ ನಿರ್ಮೂಲನೆಗೆ ಲೇಖನಿ ಸಿದ್ಧವಾಗಬೇಕಿದೆ ಎಂದರು.

ಈ ಹೊತ್ತು ಅನೀತಿಯೇ ನೀತಿಯಾಗಿದೆ. ಅಕ್ರಮಗಳೇ ಕ್ರಮಗಳಾಗಿವೆ. ಅಧರ್ಮ, ಅಸತ್ಯ ಎಲ್ಲವನ್ನೂ ತೊಡೆದು ಆದರ್ಶ ಸಮಾಜ ಕಟ್ಟುವ ಕಡೆಗೆ ನಡೆಯಬೇಕಿದೆ. ಭೇದಭಾವ ಇಲ್ಲದ, ಪಕ್ಷಪಾತ ರಹಿತ, ವರ್ಗ ಮತ್ತು ವರ್ಣ ರಹಿತ ಸಮಾಜ ಕಟ್ಟುವ ನಿಟ್ಟಿನಲ್ಲಿ ಕವಿತೆ ಬರೆಯಬೇಕು ಎಂದು ಸಲಹೆ ನೀಡಿದರು.

ಮನುಷ್ಯ ನೀಚಗುಣ ಖಂಡಿಸಿ ಬರೆಯಬೇಕು. ಸಮಾಜದ ಸ್ವಾಸ್ಥ್ಯ ಹದಗೆಡಿಸಿದ ವ್ಯಕ್ತಿಗಳು, ಜಾತಿ, ಧರ್ಮ, ಶೋಷಣೆಗಳು ಕವಿತೆಗಳಾಗಿ ರೂಪುಗೊಳ್ಳಬೇಕು. ಇವತ್ತು ಸರ್ವಜ್ಞನಂತಹ ಸಮಾಜ ವಿಜ್ಞಾನ ಕವಿಯ ಅವಶ್ಯಕತೆ ಇದೆ ಎಂದು ನುಡಿದರು.

ಕವಿತೆ ಎಲ್ಲಿದೆ ಕೇಳಿದರೆ? ಕವಿಯೇ ಕವಿಯೇ ನಿನ್ನೊಳಗೆ ಅವಿತೆ ಎಂದು ಕಾವ್ಯದೇವಿ ನುಡಿಯಬಹುದು. ಹದಿಹರೆಯದ ಹುಡುಗ-ಹುಡುಗಿಯರ ಮಾತು ಕೇಳಿಸಿಕೊಂಡರೆ ಎಲ್ಲ ಕವಿಗಳು ನಾಚಬೇಕು. ಆಕಾಶದ ನಕ್ಷತ್ರ ತಂದು ನಿನ್ನ ತರುಬಿಗೆ ಮುಡಿಸುವೆ ಎಂದು ಪ್ರಿಯಕರ ಹಾಡಿದರೆ, ಅದು ಅಸಾಧ್ಯವೆಂದು ಗೊತ್ತಿದ್ದರೂ ಯುವತಿ ನಾಚುತ್ತಾಳೆ. ಅದೇ ಕಾವ್ಯಕ್ಕಿರುವ ಶಕ್ತಿ ಎಂದರು.

ಸಂಸ್ಕೃತಿಯ ರೂವಾರಿಯಾದ ಕವಿಗಳು ಹೊಸ ಸಮಾಜ ಕಟ್ಟುವ ಸಂಕಲ್ಪ ಮಾಡಬೇಕು. ಹೊಸ ಕವಿತೆಗೆ ಇನ್ನೂ ಕಾಲ ಇದೆ. ಭಾಷೆ ಪುನರ್ ನವೀಕರಣ ಮಾಡುವವರು ಕವಿಗಳೇ. ಹಾಗೆಯೇ ಕನ್ನಡದ ಕವಿಗಳಿಗೂ ಕಾಯಕಲ್ಪ ಮಾಡಬೇಕಿದೆ. ಏನೋನೋ ಬರೆಯುವುದು ಸಲ್ಲದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ದಸರಾ ಕವಿಗೋಷ್ಠಿ-2022 ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಕವಿಗೋಷ್ಠಿ ವಿಶೇಷಾಧಿಕಾರಿ ಡಾ.ದಾಸೇಗೌಡ, ಕಾರ್ಯಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್, ಕಾರ್ಯದರ್ಶಿ ಎಚ್.ಡಿ.ಗಿರೀಶ್ ಮುಂತಾದವರಿದ್ದರು.

ಹಾಸ್ಯ ಕವಿಗೋಷ್ಠಿ: ಹಾಸ್ಯಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಧ್ಯಕ್ಷತೆಯಲ್ಲಿ ಹಾಸ್ಯ ಕವಿಗೋಷ್ಠಿ ಕಾವ್ಯಾಸಕ್ತರನ್ನು ರಂಜಿಸಿತು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಇದ್ದರು. ದುಂಡಿರಾಜ್, ಭುವನೇಶ್ವರಿ ಹೆಗಡೆ, ಸುಕನ್ಯಾ ಕಳಸ, ರಾಮನಾಥ, ಶಾಂತಾರಾಮ ಶೆಟ್ಟಿ, ಆರತಿ ಘಟಿಕಾರ್, ಮೋಹನ್ ಕಳಸಾಪುರ, ಮಧುರಾಣಿ, ಭಾಸ್ಕರ್ ಹೆಬ್ಬಾರ್ ಹಾಸ್ಯ ಕವಿತೆ ವಾಚಿಸಿದರು. ಗಾಯಕ ನಿತಿನ್ ರಾಜರಾಮ್ ಶಾಸ್ತ್ರಿ ತಂಡದವರು ಗೀತ ಗಾಯನ ಕಾರ್ಯಕ್ರಮ ನೀಡಿದರು.


Spread the love