ಸಮುದ್ರ ಪಾಲಾಗುತ್ತಿದ್ದ ಬೆಂಗಳೂರಿನ ಯುವತಿಯನ್ನು ರಕ್ಷಿಸಿದ ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ

Spread the love

ಸಮುದ್ರ ಪಾಲಾಗುತ್ತಿದ್ದ ಬೆಂಗಳೂರಿನ ಯುವತಿಯನ್ನು ರಕ್ಷಿಸಿದ ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ

ಮಂಗಳೂರು: ಬೆಂಗಳೂರಿನಿಂದ ಪ್ರವಾಸಕ್ಕೆಂದು ಮಂಗಳೂರಿನ ಸೋಮೇಶ್ವರಕ್ಕೆ ಬಂದಿದ್ದ ಮೂರು ಮಂದಿ ಯುವತಿಯರು ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ, ಒಬ್ಬಾಕೆ ದೊಡ್ಡ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದಾಗ ಕರಾವಳಿ ಕಾವಲು ಪೊಲೀಸ್ ನ ಕರಾವಳಿ ನಿಯಂತ್ರಣ ದಳದ ಅಶೋಕ್ ಕುಮಾರ್ ಸೋಮೇಶ್ವರ ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರಿನ ಬೊಮ್ಮಸಂದ್ರದ ಯುವತಿ ಕೀರ್ತಿ ತನ್ನ ಸ್ನೇಹಿತೆಯರಾದ ತಿಪ್ಪಸಂದ್ರದ ಜಯಶ್ರೀ ಮತ್ತು ಇಂದಿರಾನಗರದ ಕ್ರಿಯಾ ಜೊತೆಗೂಡಿ ಮಂಗಳೂರಿಗೆ ಬಂದವರು ಮಂಗಳವಾರ ಮಧ್ಯಾಹ್ನ ಹೊತ್ತಿಗೆ ಸೋಮೇಶ್ವರ ಕಡಲ ತೀರಕ್ಕೆ ಬಂದಿದ್ದರು. ಎಲ್ಲರು ಸಮುದ್ರದ ದಡದಲ್ಲಿ ಆಟವಾಡುತ್ತಿದ್ದಾಗ ಕೀರ್ತಿ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದುದನ್ನು ಗಮನಿಸಿದ ಕರಾವಳಿ ಕಾವಲು ಪೊಲೀಸ್ ನ ಸಿಬ್ಬಂದಿ ಅಶೋಕ್ ಸೋಮೇಶ್ವರ, ಕಿರಣ್ ಆಂಟನಿ ಮತ್ತು ಶಿವಪ್ರಸಾದ್ ತಕ್ಷಣ ನೀರಿಗೆ ಧುಮುಕಿ ಕೀರ್ತಿಯನ್ನು ರಕ್ಷಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಕೀರ್ತಿಗೆ ಜೀವರಕ್ಷಕರು ಪ್ರಥಮ ಚಿಕಿತ್ಸೆ ನೀಡಿದ ಕಾರಣ ಕೀರ್ತಿ ಚೇತರಿಸಿಕೊಂಡಿದ್ದಾರೆ.

ಕಳೆದ ಡಿ. 29ರಂದು ಚೆಂಬುಗುಡ್ಡೆಯ ಮಹಿಳೆಯೊಬ್ಬರು ಸೋಮೇಶ್ವರ ಸಮುದ್ರ ದಡದಲ್ಲಿರುವ ರುದ್ರಪಾದೆಯಿಂದ ಕಾಲು ಜಾರಿ ಬಿದ್ದು ಸಮುದ್ರ ಪಾಲಾಗುತ್ತಿದ್ದಾಗ ಅಶೋಕ್ ಕುಮಾರ್ ಮತ್ತು ಅವರ ಸ್ನೇಹಿತರು ಮಹಿಳೆಯನ್ನು ರಕ್ಷಿಸಿದ್ದರು.

ಸದರಿ ಮೂರು ಜನ ಕರಾವಳಿ ಕಾವಲು ಪೊಲೀಸ್ ನ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿಗಳ ಕಾರ್ಯವನ್ನು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರಾದ ಚೇತನ್.ಆರ್, ಐ.ಪಿ.ಎಸ್, ರವರು ಶ್ಲಾಘಿಸಿದ್ದು ತಲಾ 2,000/- ರೂ ಬಹುಮಾನ ಘೋಷಿಸಿರುತ್ತಾರೆ.


Spread the love