ಸಮುದ್ರ ಮಧ್ಯದಲ್ಲಿ ಮೊಳಗಿದ ‘ಕೋಟಿ ಕಂಠ ಗಾಯನ’, ಸಾಥ್ ನೀಡಿದ ಮೀನುಗಾರರು

Spread the love

ಸಮುದ್ರ ಮಧ್ಯದಲ್ಲಿ ಮೊಳಗಿದ ‘ಕೋಟಿ ಕಂಠ ಗಾಯನ’, ಸಾಥ್ ನೀಡಿದ ಮೀನುಗಾರರು

ಉಡುಪಿ: ಈ ಬಾರಿಯ 67 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಹೆಚ್ಚಿನ ಸಂಭ್ರಮ ಉತ್ಸಾಹದಿಂದ ಅತ್ಯಂತ ವಿಶಿಷ್ಠವಾಗಿ ಆಚರಿಸುವ ನಿಟ್ಟಿನಲ್ಲಿ ಜನರಿಂದ ಏಕ ಕಾಲದಲ್ಲಿ, ಏಕ ಕಂಠದಲ್ಲಿ ಆಯ್ದ 6 ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಲ್ಪೆಯ ಸಮುದ್ರ ಮಧ್ಯದಲ್ಲಿ ಸುಮಾರು 130ಕ್ಕಿಂತಲೂ ಹೆಚ್ಚು ಬೋಟು ಗಳಲ್ಲಿ 5000 ಜನರೊಂದಿಗೆ ಅತ್ಯಂತ ವಿಶಿಷ್ಠವಾಗಿ ನಡೆಯಿತು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೀನು ಮಾರಾಟ ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿದ್ದು, ಮಲ್ಪೆಯ ಸೀ ವಾಕ್ ಬಳಿ ಸೇರಿದ ಕಾಲೇಜುಗಳ ವಿದ್ಯಾರ್ಥಿಗಳು ಮೀನುಗಾರರು ಸೇರಿದಂತೆ ಸಾವಿರಾರು ಮಂದಿ ಕನ್ನಡ ಧ್ವಜಗೊಳೊಂದಿಗೆ ಸಿಂಗರಿಸಿದ ಬೇರೆ ಬೇರೆ ಬೋಟುಗಳಲ್ಲಿ ಸಮುದ್ರದ ಮಧ್ಯದಲ್ಲಿ ತೆರಳಿ ಆರು ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ಸಂಪೂರ್ಣ ಖರ್ಚು ವೆಚ್ಚದ ಉಸ್ತುವಾರಿಯನ್ನು ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ವಹಿಸಿದ್ದರು.

ಬೋಟಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮೀನುಗಾರರ ಸಂಘಟನೆಗಳ ಅಧ್ಯಕ್ಷರಾದ ದಯಾನಂದ ಸುವರ್ಣ, ನಾಗರಾಜ್ ಸುವರ್ಣ, ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಸುಭಾಶ್ ಮೆಂಡನ್, ಉದಯ್ ಕುಮಾರ್ ರಾಜೇಂದ್ರ ಕುಮಾರ್, ಬೋಟ್ ಮುಖ್ಯಸ್ಥ ಗಣೇಶ ್ಮಲ್ಪೆ, ಸನತ್ ಸಾಲ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ’, ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ’ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಆರು ಗೀತೆಗಳನ್ನು ಹಾಡಲಾಯಿತು. ಗೀತೆಗಳ ಗಾಯನ ನಡೆಯಲಿದ್ದು, ಕೊನೆಯಲ್ಲಿ ಸಂಕಲ್ಪ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಬ್ಯಾಂಡ್ ನೊಂದಿಗೆ 5000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಮಣಿಪಾಲ ಗ್ರೀನ್ಸ್ ನಲ್ಲಿ 5000 ಮಂದಿ ಡಾಕ್ಟರ್‌ಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಬಿಳಿ ಕೋಟ್ ಹಾಗೂ ಸ್ಕೆತೋಸ್ಕೋಪ್ ಧರಿಸಿ , ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ 3000 ವಿದ್ಯಾರ್ಥಿಗಳು, ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ 3000 ಮಂದಿ ಕಾರ್ಮಿಕರು, ಬೀಡನಗುಡ್ಡೆಯ ಮಹಾತ್ಮಗಾಂಧೀ ಬಯಲು ರಂಗ ಮಂದಿರಲ್ಲಿ ಕಟ್ಟಡ ಕಾರ್ಮಿಕರು, ಉಡುಪಿ ನಗರಸಭೆಯಿಂದ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ , ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ, ಕಾರ್ಕಳದ ಅತ್ತೂರು ಚರ್ಚ್, ಚತುರ್ಮುಖ ಬಸದಿ, ಗೊಮ್ಮಟಬೆಟ್ಟ, ಆನೆಕೆರೆ ಬಸದಿ, ವರಂಗ ಬಸದಿ, ಕಾಪು ಜೂನಿಯರ್ ಕಾಲೇಜು ಮೈದಾನ, ಬಂಟಕಲ್ ಇಂಜಿನಿಯರ್ ಕಾಲೇಜು , ಕುಂದಾಪುರ ಜೂನಿಯರ್ ಕಾಲೇಜು ಮೈದಾನ, ಬೈಂದೂರು ಗಾಂಧೀ ಮೈದಾನ, ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಗ್ರಂಥಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಬಸ್ ನಿಲ್ದಾಣ, ಧಾರ್ಮಿಕ ಕೇಂದ್ರಗಳಲ್ಲಿ, ಬ್ಯಾಂಕ್ , ಎಲ್.ಐ.ಸಿ ಕಚೇರಿಗಳಲ್ಲಿ, ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕೂಡ ಕಾರ್ಯಕ್ರಮ ಆಯೋಜಿಸಲಾಗಿತ್ತು


Spread the love