ಸರಕಾರಿ ಆಸ್ಪತ್ರೆಗಳ ಡಯಾಲಿಸ್‌ ಘಟಕಗಳ ಸಮಸ್ಯೆ ಬಗಹರಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟ – ಅನ್ಸಾರ್‌ ಅಹಮ್ಮದ್

Spread the love

ಸರಕಾರಿ ಆಸ್ಪತ್ರೆಗಳ ಡಯಾಲಿಸ್‌ ಘಟಕಗಳ ಸಮಸ್ಯೆ ಬಗಹರಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟ – ಅನ್ಸಾರ್‌ ಅಹಮ್ಮದ್

ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸ್‌ ಘಟಕಗಳಲ್ಲಿ ನವೆಂಬರ್‌ 15 ರ ಸಂಜೆಯೊಳಗೆ ಸಿಬ್ಬಂದಿ ವರ್ಗದವರ ಹಲವು ತಿಂಗಳಿಂದ ಬಾಕಿ ಇರುವ ವೇತನ ಪಾವತಿ, ಹಾಗೂ ರಾಜ್ಯದ ಎಲ್ಲಾ ಡಯಾಲಿಸೀಸ್ ಘಟಕದಲ್ಲಿ ಖಾಲಿಯಾಗಿರುವ ರಾಸಾಯನಿಕ ಸಾಮಾಗ್ರಿ ಹಾಗೂ ಫಿಲ್ಟರ್ ಗಳನ್ನು ಭರ್ತಿ ಮಾಡುವಲ್ಲಿ ಸರಕಾರ ವಿಫಲವಾದರೆ ನವೆಂಬರ್‌ 16 ರಂದು ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನ್ಸಾರ್‌ ಅಹ್ಮದ್‌ ಎಚ್ಚರಿಸಿದ್ದಾರೆ.

ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಇರುವ ಒಟ್ಟು 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆಯನ್ನು ಬಿ.ಆರ್.ಎಸ್. ಕಂಪನಿ ಹಾಗೂ ಉಳಿದ 8 ಜಿಲ್ಲೆಗಳ ಡಯಾಲಿಸಿಸ್ ಘಟಕದ ಸೇವೆಯ ಗುತ್ತಿಗೆಯನ್ನು ಹೊರ ರಾಜ್ಯದ ಸಂಜೀವಿನಿ ಹೆಸರಿನ ಖಾಸಗಿ ಸಂಸ್ಥೆ ವಹಿಸಿಕೊಂಡಿರುತ್ತದೆ. ಎಪ್ರಿಲ್ 2017ರಲ್ಲಿ ಮುಂದಿನ 5 ವರ್ಷಗಳ ವರೆಗಿನ ನಿರ್ವಹಣೆಯ ಒಡಂಬಡಿಕೆಯನ್ನು ಕರ್ನಾಟಕ ಸರಕಾರದೊಂದಿಗೆ ಈ ಖಾಸಗಿ ಕಂಪನಿಗಳು ಮಾಡಿಕೊಂಡಿರುತ್ತದೆ. ಆದರೆ ಬಿ.ಆರ್.ಎಸ್. ಕಂಪನಿ ನಷ್ಟದಲ್ಲಿರುವುದರಿಂದ ಕಳೆದ ಕೆಲವು ತಿಂಗಳ ಹಿಂದೆ ಡಯಾಲಿಸೀಸ್ ಘಟಕದ ನಿರ್ವಹಣೆ ತನ್ನಿಂದ ಅಸಾಧ್ಯವೆಂಬುದಾಗಿ ಸರಕಾರಕ್ಕೆ ಪತ್ರ ಬರೆದಿರುತ್ತದೆ.

ಇದೀಗ ಕರ್ನಾಟಕದ 23 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 122 ಡಯಾಲಿಸೀಸ್ ಘಟಕದ ಸುಮಾರು 1,000ಕ್ಕೂ ಮೇಲ್ಪಟ್ಟ ಸಿಬ್ಬಂಧಿಗಳಿಗೆ ಕಳೆದ 5 ತಿಂಗಳುಗಳಿಂದ ವೇತನ ಪಾವತಿಯಾಗಿರುವುದಿಲ್ಲ. ಸರಕಾರ ಹಾಗೂ ಖಾಸಗಿ ಸಂಸ್ಥೆಯ ನಡುವೆ ನಡೆದಿರುವ ಒಪ್ಪಂದದಂತೆ ನಡೆದುಕೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, 30, ಜೂನ್ 2021ರವರೆಗೆ ಸುಮಾರು 33 ಕೋಟಿ ರುಪಾಯಿಗಳನ್ನು ಬಾಕಿ ಇಟ್ಟಿರುವುದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವೆಂಬುದು ಬಿ. ಆರ್. ಎಸ್ ಖಾಸಗಿ ಸಂಸ್ಥೆಯ ಆರೋಪವಾಗಿರುತ್ತದೆ. ಇದು ಸರಕಾರಕ್ಕೆ ಬಡ ಕಾರ್ಮಿಕರ ಹಾಗೂ ರೋಗಿಗಳಬಗ್ಗೆ ಇರುವ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ,

ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಡಯಾಲಿಸೀಸ್‌ಗೆ ಅಗತ್ಯ ಇರುವ ರಾಸಾಯನಿಕ ಸಾಮಾಗ್ರಿಗಳು ಹಾಗೂ ಫಿಲ್ಟರ್‌ಗಳು ಸಂಪೂರ್ಣವಾಗಿ ಖಾಲಿಯಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿರುತ್ತದೆ. ಇದರಿಂದಾಗಿ ಬಡ ರೋಗಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ರೋಗಿಗಳ ಸಾವು-ನೋವು ಸಂಭವಿಸುವ ದಿನಗಳು ದೂರವಿಲ್ಲ, ಇಂತಹ ಘಟನೆಗಳು ಸಂಭವಿಸಿದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುತ್ತು ರಾಜ್ಯ ಸರಕಾರ ನೇರ ಹೊಣೆಯಾಗುತ್ತದೆ. ಸೋಮವಾರ ದಿನಾಂಕ 15-11-2021 ರ ಸಂಜೆಯೊಳಗೆ ಸಿಬ್ಬಂಧಿವರ್ಗದವರ ಹಲವು ತಿಂಗಳಿಂದ ಬಾಕಿ ಇರುವ ವೇತನ ಪಾವತಿ, ಹಾಗೂ ರಾಜ್ಯದ ಎಲ್ಲಾ ಡಯಾಲಿಸೀಸ್ ಘಟಕದಲ್ಲಿ ಖಾಲಿಯಾಗಿರುವ ರಾಸಾಯನಿಕ ಸಾಮಾಗ್ರಿ ಹಾಗೂ ಫಿಲ್ಟರ್ ಗಳನ್ನು ಭರ್ತಿ ಮಾಡುವಲ್ಲಿ ಸರಕಾರ ವಿಫಲವಾದರೆ ಮಂಗಳವಾರ ದಿನಾಂಕ 16-11-2021 ರ ಬೆಳಿಗ್ಗೆ 11ರಿಂದ ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ಅವರು ಹೇಳಿದರು.

ಯುವಶಕ್ತಿ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಪ್ರಮೋದ್‌ ಉಚ್ಚಿಲ್‌ ಮಾತನಾಡಿ ರಾಜ್ಯ ಸರಕಾರ 23 ಜಿಲ್ಲೆಗಳ ಡಯಾಲಿಸಿಸ್‌ ಘಟಕಗಳ ನಿರ್ವಹಣೆಯನ್ನು 5 ವರ್ಷಗಳಿಗಾಗಿ ಬಿ ಆರ್‌ ಎಸ್‌ ಸಂಸ್ಥೆಗೆ ನೀಡಿದ್ದು ಅವರಿಗೆ ಸುಮಾರು 33 ಕೋಟಿ ರೂಪಾಯಿಗಳನ್ನು ಬಾಕಿ ಇರಿಸಿದ್ದು, ಕೂಡಲೇ ಅದನ್ನು ಪಾವತಿಸಬೇಕು. ಸರಕಾರಕ್ಕೆ ಆರೋಗ್ಯದ ಕಾಳಜಿ ಇರಬೇಕು. ಜಿಲ್ಲೆಯಲ್ಲಿ 5 ಮಂದಿ ಶಾಸಕರು ಒರ್ವ ಸಂಸದೆ ಮತ್ತು ಮಾಜಿ ಸಚಿವರುಗಳು ಈಗ ಬಗ್ಗೆ ಮೌನ ಮುರಿದು ರೋಗಿಗಳ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಸುಮಾರು 90-100 ರೋಗಿಗಳು ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದು ಸುಮಾರು 30 ರೋಗಿಗಳು ಪ್ರತಿನಿತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಡಯಾಲಿಸೀಸ್‌ಗೆ ಅಗತ್ಯ ಇರುವ ರಾಸಾಯನಿಕ ಸಾಮಾಗ್ರಿಗಳು ಹಾಗೂ ಫಿಲ್ಟರ್‌ಗಳು ಸಂಪೂರ್ಣವಾಗಿ ಖಾಲಿಯಾಗಿರುವುದು ಗಂಭೀರ ವಿಚಾರವಾಗಿದ್ದು ರೋಗಿಗಳ ಪ್ರಾಣಕ್ಕೆ ಸಂಚಿಕಾರ ತರುವ ಕೆಲಸ ಜಿಲ್ಲಾಡಳಿತ ಮಾಡುತ್ತಿದ್ದು ಏನೇ ಹೆಚ್ಚುಕಡಿಮೆಯಾದರೂ ಇದಕ್ಕೆ ಜಿಲ್ಲಾಡಳೀತ ಮತ್ತು ಸರಕಾರ ನೇರ ಹೊಣೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ಸಂಚಾಲಕರಾದ ಪ್ರಸನ್ನ ಕುಮಾರ್‌ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷರಾದ ಸುಧೀರ್‌ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷರಾದ ಹನೀಫ್‌ ಕಾರ್ಕಳ, ಯುವಶಕ್ತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್‌ ಕುತ್ಪಾಡಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love