ಸರ್ಕಾರವೇ ತಂಬಾಕು ಖರೀದಿಸಿ, ಕಂಪನಿಗಳಿಗೆ ಮಾರಾಟ ಮಾಡಲಿ

Spread the love

ಸರ್ಕಾರವೇ ತಂಬಾಕು ಖರೀದಿಸಿ, ಕಂಪನಿಗಳಿಗೆ ಮಾರಾಟ ಮಾಡಲಿ

ಪಿರಿಯಾಪಟ್ಟಣ: ತಂಬಾಕು ದರ ಕುಸಿತಗೊಂಡಾಗ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ತಂಬಾಕು ಖರೀದಿಸಿ ದರ ಹೆಚ್ಚಳವಾದಾಗ ಕಂಪನಿಗಳಿಗೆ ಮಾರಾಟ ಮಾಡುವ ಪದ್ಧತಿ ಜಾರಿಗೆ ತರುವಂತೆ ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ ಬಸವರಾಜು ಆಗ್ರಹಿಸಿದರು.

ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ತಂಬಾಕು ಖರೀದಿ ಚಾಲನೆ ವೇಳೆ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಿ ಅವರು ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ತಂಬಾಕು ಬೆಳೆಯುವ ರೈತರಿಗೆ ಖರೀದಿ ದರಕ್ಕಿಂತ ಬೆಳೆ ಬೆಳೆಯುವ ಆರ್ಥಿಕ ಹೊಡೆತವೇ ಹೆಚ್ಚಾಗುತ್ತಿದ್ದು ಖರೀದಿದಾರ ಕಂಪೆನಿಗಳು ಉತ್ತಮ ಗುಣಮಟ್ಟದ ತಂಬಾಕಿಗೆ ಗರಿಷ್ಠ ಬೆಲೆ ನೀಡುವ ಮೂಲಕ ತಂಬಾಕು ರೈತರ ಹಿತ ಕಾಪಾಡಬೇಕಿದೆ. 150 ಮಿಲಿಯನ್ ಕೆಜಿ ತಂಬಾಕು ಬೆಳೆಯುತ್ತಿದ್ದ ರೈತರು ಈಗ 50 ಮಿಲಿಯನ್ ಕೆಜಿ ತಂಬಾಕು ಬೆಳೆಯುವ ಪರಿಸ್ಥಿತಿ ಬಂದೊದಗಿದ್ದು ಮುಂಬರುವ ದಿನಗಳಲ್ಲಿ ರೈತರು ತಂಬಾಕು ಬೆಳೆಯುವುದನ್ನು ನಿಲ್ಲಿಸಿದರೂ ಆಶ್ಚರ್ಯವಿಲ್ಲ. ಆಗ ತಂಬಾಕು ಮಂಡಳಿ ಸಹ ಇರುವುದಿಲ್ಲ ಜತೆಗೆ ರೈತರ ಹಿತ ಕಾಪಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೊದಲ ದಿನದ ಖರೀದಿ ಪ್ರಕ್ರಿಯೆಯಲ್ಲಿ ಉತ್ತಮ ದರ್ಜೆ ತಂಬಾಕು ಕೆಜಿಗೆ 200 ರೂ. ನಂತೆ ಪ್ರಾರಂಭಿಕ ಬೆಲೆ ನೀಡಿದಾಗ ರೈತ ಮುಖಂಡರಾದ ಸೋಮೇಗೌಡ, ದಶರಥ, ಬಿ.ಜೆ ದೇವರಾಜು, ಪ್ರಕಾಶ್ ರಾಜೇಅರಸ್, ರಾಮನಾಥತುಂಗ ಶ್ರೀನಿವಾಸ್ ಮತ್ತಿತರರು ನಿಗದಿತ ಸರಾಸರಿ ಬೆಲೆ ಕಡಿಮೆಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಮಧ್ಯಪ್ರವೇಶಿಸಿದ ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ಖರೀದಿ ಕಂಪೆನಿಗಳು ಮುಂಬರುವ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ಭರವಸೆ ನೀಡಿದರು.

ಹರಾಜು ಮಾರುಕಟ್ಟೆ ಪ್ರಾರಂಭ ದಿನ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ಅವರು ಗೈರಾಗಿದ್ದಕ್ಕೆ ಹಲವು ರೈತರು ಅಸಮಾಧಾನ ವ್ಯಕ್ತಪಡಿಸಿ ಖರೀದಿ ಸಂದರ್ಭ ದಲ್ಲಾಳಿಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ತಂಬಾಕು ಮಂಡಳಿ ಅಧಿಕಾರಿಗಳಾದ ವೇಣುಗೋಪಾಲ್, ಶಂಭುಗೌಡ, ರಾಮ್ ಮೋಹನ್, ಪ್ರಭಾಕರ್, ಕೆಡಬ್ಲುಎಸ್ಎಸ್ ಬಿ ನಾಮನಿರ್ದೇಶಕ ಸದಸ್ಯ ಆರ್.ಟಿ ಸತೀಶ್, ಮುಖಂಡರಾದ ವಿಕ್ರಂರಾಜ್, ಮಹೇಶ್, ಬೆಕ್ಕರೆ ಮಹದೇವ್, ದೊಡ್ಡೇಗೌಡ, ವೀರಭದ್ರ, ಹರೀಶ್, ರೈತ ಸಂಘದ ಪದಾಧಿಕಾರಿಗಳು ಹಾಗೂ ತಂಬಾಕು ಬೆಳೆಗಾರರು ಇದ್ದರು.


Spread the love